ಚನ್ನರಾಯಪಟ್ಟಣ: ರಸ್ತೆ ಅಪಘಾತದಲ್ಲಿ ಗಾಯಗೊಂಡು ಮಿದುಳು ನಿಷ್ಕ್ರೀಯಗೊಂಡಿದ್ದ ಮಗನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಪಾಲಕರು ಮಾನವೀಯತೆ ಮೆರೆದಿದ್ದಾರೆ.
ತಾಲೂಕಿನ ಹಿರೀಸಾವೆ ಹೋಬಳಿಯ ಮಾಚಭೂವನಹಳ್ಳಿ (ಕಾವಲುಬೋರೆ) ಗ್ರಾಮದ ಸುಹಾಸ್‌ಗೌಡ(19) ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಕೋಮ ಸ್ಥಿತಿಯಲ್ಲಿದ್ದು ಮೃತಪಟ್ಟ ಯುವಕ. ಈತನ ತಂದೆ ಸುರೇಶ್ ಹಾಗೂ ತಾಯಿ ಶಾಂತಲಾ ಎಂಬವರೇ ಮಗನ ಅಂಗಾಗ ದಾನ ಮಾಡಿದ ಪಾಲಕರು.
ಘಟನೆಯ ವಿವರ: ತಾಲೂಕಿನ ಮಾಚಭೂವನಹಳ್ಳಿ ಗ್ರಾಮದ ಸುರೇಶ್ ಹಾಗೂ ಶಾಂತಲಾ ದಂಪತಿಗಳ ಪುತ್ರ ಸುಹಾಸ್‌ಗೌಡ ಶಿಕ್ಷಣ ಮುಗಿಸಿಕೊಂಡು ದುಡಿಯುವ ಸಲುವಾಗಿ ಬೆಂಗಳೂರು ಸೇರಿದ್ದು ಬ್ಯಾಟರಿ ವರ್ಕ್ ಶಾಪ್‌ನಲ್ಲಿ ಕೆಲಸ ಮಾಡಿಕೊಂಡಿದ್ದನು.
ಸುಹಾಸ್‌ಗೌಡ ಹಾಗೂ ಆತನ ಸ್ನೇಹಿತ ಹಿರೀಸಾವೆ ಗ್ರಾಮದ ಹರ್ಷ ಇಬ್ಬರು ಸೇರಿ ಡಿ.9 ರಂದು ಸೋಮವಾರ ಸಂಜೆ 5.30 ಸುಮಾರಿನಲ್ಲಿ ದ್ವಿಚಕ್ರ ವಾಹನದಲ್ಲಿ ಬೆಂಗಳೂರಿನಿಂದ ಮಹದೇಶ್ವರ ಬೆಟ್ಟಕ್ಕೆ ತೆರಳುತಿದ್ದರು. ಹರ್ಷ ಬೈಕ್ ಓಡಿಸುತಿದ್ದ ಎನ್ನಲಾಗಿದೆ.
ಟಿ.ನರಸೀಪುರ ಬಳಿ ತಿರುವು ರಸ್ತೆಯಲ್ಲಿ ಸಾಗಿತಿದ್ದ ವೇಳೆ ಎದುರಾಗಿ ವೇಗದಲ್ಲಿ ಬಂದ ಕಾರು ಬೈಕಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಯುವಕರಿಬ್ಬರು ರಸ್ತೆ ಬದಿಗೆ ಬಿದ್ದು ಗಾಯಗೊಂಡಿದ್ದಾರೆ. ಅದೇ ಮಾರ್ಗವಾಗಿ ಸಾಗುತಿದ್ದ ಬಿಜಿಎಸ್ ಅಪೋಲೋ ಆಸ್ಪತ್ರೆಯ ವೈದ್ಯರೊಬ್ಬರು ಅವರದ್ದೇ ಕಾರಿನಲ್ಲಿ ಸಾಗಿಸಿ ಯುವಕರಿಬ್ಬರನ್ನು ಬೆಂಗಳೂರಿನ
ಅಪಲೋ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸುಹಾಸ್‌ಗೌಡನ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದ ಪರಿಣಾಮ ಪ್ರಜ್ಞಾಹೀನ ಸ್ಥಿತಿ ತಲುಪಿದ್ದು ಮತ್ತೊಬ್ಬ ಯುವಕ ಹರ್ಷನಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಆತ ಇನ್ನೂ ಅಪಲೋ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತಿದ್ದಾನೆ. ಈ ಸಂಬಂಧ ಮೈಸೂರಿನ ವರುಣ ಪೊಲೀಸ್ ಠಾಣೆಯಲ್ಲಿ
ದೂರು ದಾಖಲಾಗಿದೆ.
ಅಂಗಾಂಗ ದಾನ: ತಲೆಗೆ ತೀವ್ರ ಪೆಟ್ಟು ಬಿದ್ದಿದ್ದ ಸುಹಾಸ್‌ಗೌಡನಿಗೆ ಮೂರು ದಿನಗಳಿಂದ ಅದೆಷ್ಟೇ ಚಿಕಿತ್ಸೆ ನೀಡಿದರೂ ಚೇತರಿಕೆ ಕಾಣದೆ ಸಂಪೂರ್ಣ ಪ್ರಜ್ಞಾಹೀನ ಸ್ಥಿತಿ ತಲುಪಿದ್ದ. ವೈದ್ಯರು ಆತನ ಪ್ರಾಣ ಕಾಪಾಡಲು ಮಾಡಿದ ಪ್ರಯತ್ನಗಳು ಕೈಗೂಡದ್ದರಿಂದ ಪಾಲಕರು ಆತನ ಅಂಗಾಂಗಗಳನ್ನು ಗುರುವಾರ ದಂದು ದಾನ ಮಾಡುವ ನಿರ್ಧಾರ ಕೈಗೊಂಡರು. ಪಾಲಕರ ಒಪ್ಪಿಗೆ ಮೇರೆಗೆ ವೈದ್ಯರು ಕೃತಕ ಉಸಿರಾಟ ವ್ಯವಸ್ಥೆ ಸ್ಥಗಿತಗೊಳಿಸಿ ಅಂಗಾಗ ದಾನದ ಪ್ರಕ್ರಿಯೆ ನಡೆಸಿದರು. ಆಸ್ಪತ್ರೆ ವೈದ್ಯರು, ಸಿಬ್ಬಂದಿ ಸುಹಾಸ್ ಶವವನ್ನು ಅಂಬುಲೆನ್ಸ್ ಗೆ ಸಾಗಿಸುವಾಗ ಇಕ್ಕೆಲೆಗಳಲ್ಲಿ ನಿಂತು ಗೌರವ ಸಲ್ಲಿಸಿದರು.
ಸ್ಮಶಾನ ಮೌನ: ಕಣ್ಣಮುಂದೆ ಆಡಿಕೊಂಡು ಬೆಳೆದು, ಈಗಷ್ಟೆ
ದುಡಿದು ಬದುಕು ಕಟ್ಟಿಕೊಳ್ಳುವ ಸಲುವಾಗಿ ದುಡಿಮೆಗೆ ಮುಂದಾಗಿದ್ದ ಊರಿನ ಮಗನೊಬ್ಬ ಅಪಘಾತದಲ್ಲಿ ಮಿದುಳು ನಿಷ್ಕ್ರಿಯೆಗೊಂಡು ಪ್ರಜ್ಞಾಹೀನ ಸ್ಥಿತಿ ತಲುಪಿ ಜೀವ ಕಳೆದುಕೊಂಡ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ.
ಮುಗಿಲು ಮುಟ್ಟಿದ ಆಕ್ರಂದನ: ಪಾಲಕರಾದ ಸುರೇಶ್ ಹಾಗೂ ಶಾಂತಲಾ ಅವರಿಗೆ ಒಬ್ಬಳು ಮಗಳಿದ್ದು ಸುಹಾಸ್‌ಗೌಡ ಒಬ್ಬನೇ ಮಗ. ಗುರುವಾರ ಸಂಜೆ ಅವರ ಜಮೀನಿನಲ್ಲಿಯೇ ಯುವಕನ ಅಂತ್ಯಸಂಸ್ಕಾರ ನೆರವೇರಿದ್ದು ಪಾಲಕರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.