ಹಾಸನ: ವಾಲ್ಮೀಕಿ, ಎಸ್‌ಟಿಪಿ, ಟಿಎಸ್‌ಪಿ ಹಣ ದುರುಪಯೋಗ, ಮುಡಾ ಹಗರಣಗಳಿಂದಾಗಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಭವಿಷ್ಯ ನುಡಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸರ್ಕಾರದಲ್ಲಿ ಬರೀ ಹಗರಣಗಳು ಬೆಳಕಿಗೆ ಬರುತ್ತಿವೆ. ಎಲ್ಲ ಹಗರಣಗಳು ದಲಿತರಿಗೆ ಸೇರಬೇಕಿದ್ದ ಹಣದ್ದೇ ಆಗಿವೆ.
ಇದು ದಲಿತರಿಗೆ ಮಾಡಿರುವ ಮೋಸ, ಹಗರಣಗಳು ಹೊರ ಬಂದ ಮೇಲೆ ಸಿದ್ದರಾಮಯ್ಯ ಅವರು ಮಂಕಾಗಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ದಲಿತರ ಶಾಪ ತಟ್ಟಿದೆ. ಆಡಳಿತ ದಲಿತ ವಿರೋಧಿಯಾಗಿ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಸರ್ಕಾರ ಕೋಮಾ ಸ್ಟೇಜ್‌ನಲ್ಲಿದೆ. ಕೆಲಸಾನೂ ಮಾಡುತ್ತಿಲ್ಲ, ಸುಮ್ಮನೇನೂ ಇರುವುದಿಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ತೆಲಂಗಾಣ ಎಲೆಕ್ಷನ್ ಹೋಗಿದೆ. ಈ ಪ್ರಕರಣದಲ್ಲಿ ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ವಿರುದ್ಧ ಸುಳ್ಳು ಜಾಹೀರಾತು ಕೊಟ್ಟಿದ್ದಕ್ಕೆ ನಾವು ಕೇಸ್ ಹಾಕಿದ್ವಿ. ರಾಹುಲ್‌ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮೂರು ಜನ ಬೇಲ್‌ನಲ್ಲಿದ್ದಾರೆ. ಸರ್ಕಾರ ಇನ್ನೆಷ್ಟು ದಿನ ಇರುತ್ತೆ?
ಈ ಹಗರಣಗಳೆಲ್ಲ ನೋಡಿದರೆ ಸರ್ಕಾರ ಇರುವುದಿಲ್ಲ ಎಂದು ಅವರ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ ಎಂದು ಗೇಲಿ ಮಾಡಿದರು.
ಕೇಂದ್ರದಿಂದ ಐದು ಮಂತ್ರಿಗಳು ಸರ್ಕಾರ ಬೀಳಿಸಲು ಬಂದಿದ್ದಾರೆ ಅಂತಾರೆ. ಮುಂದೆ ಆಗುವುದಕ್ಕೆ ಮೊದಲೇ ಕೇವಿಯಟ್ ಹಾಕಿದ್ದಾರೆ. ಈ ಎಲ್ಲಾ ಹಗರಣಗಳಿಂದ ಸರ್ಕಾರ ಹೋಗುತ್ತೆ, ಕೇಂದ್ರ ಮಂತ್ರಿಗಳು ಬೀಳಿಸಬೇಕಿಲ್ಲ ಎಂದರು.
ಹದಿನೈದು ತಿಂಗಳು ಕಳೆದವು ಚುನಾವಣೆ ವೇಳೆ ಅವರು ಮಾಡಿರುವ ಆರೋಪಗಳ ಬಗ್ಗೆ ಏಕೆ ತನಿಖೆ ಮಾಡಿಲ್ಲ? ಕಾಂಗ್ರೆಸ್‌ನವರದ್ದು ಬ್ರಹ್ಮಾಂಡ ಭ್ರಷ್ಟಾಚಾರ.ಐವತ್ತು ವರ್ಷ ಅವರು ದೇಶದಲ್ಲಿ ಲೂಟಿ ಹೊಡೆದಿದ್ದಾರೆ. ಕಾಂಗ್ರೆಸ್‌ನವರೇ ಭ್ರಷ್ಟಾಚಾರದ ಪಿತಾಮಹರು. 187 ಕೋಟಿ ರೂ. ಹಗರಣ ನುಂಗಲಾರದ ತುತ್ತಾಗಿದೆ. ಈಗ ಅದರಿಂದ ಬಚಾವ್ ಆಗಲು ಪ್ರಯತ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.