ಹಾಸನ, ಫೆಬ್ರವರಿ 14: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿ ಗೊಂದಲ ಸೃಷ್ಟಿಯಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತೀವ್ರವಾಗಿ ಟೀಕಿಸಿದ್ದಾರೆ. ಸಕಲೇಶಪುರದಲ್ಲಿ ಮಾತನಾಡಿದ ಅವರು, “ಡಿ.ಕೆ.ಶಿವಕುಮಾರ್‌ಗೆ ಹೊಡೆದು ಕಿತ್ತುಕೊಳ್ಳುವ ಕಲೆ ಕರಗತವಾಗಿದೆ. ಅವರು ಸಮಯ ಕಾದು ಹೊಡೆದು ಕಿತ್ತುಕೊಳ್ಳುತ್ತಾರೆ, ಆಗ ಕಾಂಗ್ರೆಸ್ ನೆಲಕಚ್ಚುವುದು ಮಾತ್ರ ನಿಶ್ಚಿತ.” ಎಂದು ಲೇವಡಿ ಮಾಡಿದರು.
“ನವೆಂಬರ್ 15-16ರೊಳಗೆ ಸಿಎಂ ಬದಲಾವಣೆ ಆಗಲಿದೆ”
ಕಾಂಗ್ರೆಸ್ ಸರ್ಕಾರದಲ್ಲಿ ಗೊಂದಲವಿದ್ದು, “ಸಿಎಂ ಪ್ರತಿದಿನ ಇರುವರೋ? ಹೋಗುವರೋ? ಎಂಬ ಅನುಮಾನ ಕಾಡುತ್ತಿದೆ. ಈ ನಾಟಕ ಒಂದು ವರ್ಷದಿಂದ ನಡೆಯುತ್ತಿದೆ.” ಎಂದು ಅವರು ಕಿಡಿಕಾರಿದರು. ತಾನು ವಿರೋಧ ಪಕ್ಷದ ನಾಯಕನಾಗಿ ಸ್ಪಷ್ಟ ಮಾಹಿತಿಯನ್ನು ಹೊಂದಿರುವುದಾಗಿ ಹೇಳಿದ ಅವರು, “ನವೆಂಬರ್ 15-16ರೊಳಗೆ ಸಿಎಂ ಬದಲಾವಣೆ ಆಗಲಿದೆ. ಆಗಿಲ್ಲ ಅಂದರೆ, ಕಾಂಗ್ರೆಸ್‌ನಲ್ಲಿ ಜ್ವಾಲಾಮುಖಿ ಸಿಡಿಯುತ್ತದೆ. ಬೆಂಕಿ ಆರಿಸಲು ಅಗ್ನಿಶಾಮಕ ವಾಹನಗಳೂ ಸಾಲದು. ಈಗಲೇ ಎಲ್ಲಾ ವಾಹನಗಳನ್ನು ಬುಕ್ ಮಾಡಿಕೊಳ್ಳಿ.” ಎಂದರು.

“ಕಾಂಗ್ರೆಸ್ ಸರ್ಕಾರ ಪಾಪರ್ ಆಗಿದೆ, ಹೂಡಿಕೆದಾರರು ರಾಜ್ಯ ಬಿಡುತ್ತಿದ್ದಾರೆ”
ರಾಜ್ಯದಲ್ಲಿ ಅಭಿವೃದ್ಧಿ ಕುಸಿಯುತ್ತಿರುವುದನ್ನು ಆಕ್ಷೇಪಿಸಿದ ಅವರು, “ನಮ್ಮ ರಾಜ್ಯ ಸಮೃದ್ಧಿಯಾಗಿತ್ತು, ಆದರೆ ಈ ಸರ್ಕಾರ ಬಂದ ಮೇಲೆ ಪಾಪರ್ ಆಗಿದೆ. ಬೆಂಗಳೂರು ರಸ್ತೆಗಳು ಗುಂಡಿಯಾಗಿವೆ, ಮಳೆ ಬಂದರೆ ಮನೆಗಳಿಗೆ ನೀರು ನುಗ್ಗುತ್ತಿದೆ.” ಎಂದು ಟೀಕಿಸಿದರು.
ಹೂಡಿಕೆದಾರರು ಕರ್ನಾಟಕ ತೊರೆದು ಚೆನ್ನೈ, ಹೈದರಾಬಾದ್‌ಗೆ ಹೋಗುತ್ತಿದ್ದಾರೆ ಎಂದು ಅಶೋಕ್ ಆರೋಪಿಸಿದರು. “ಬೆಂಗಳೂರು ಮುಳುಗುತ್ತಿದೆ, ಕೇರಳದವರು ‘ಇಲ್ಲಿಗೆ ಬನ್ನಿ’ ಎಂದು ಜಾಹೀರಾತು ಹಾಕುತ್ತಿದ್ದಾರೆ. ಹೂಡಿಕೆದಾರರು ಬೆಳವಣಿಗೆಯ ಕಡೆಗೇ ನೋಡುತ್ತಾರೆ, ಆದರೆ ಇಲ್ಲಿ ಸರ್ಕಾರವೇ ಉಂಟೋ?, ಇಲ್ಲವೋ? ಎಂಬ ಅನುಮಾನ ಕಾಡುತ್ತಿದೆ.” ಎಂದು ಟೀಕಿಸಿದರು.
“ಕಾಡಾನೆ ಸಮಸ್ಯೆ, ಅರ್ಜುನನ ಪ್ರತಿಮೆ ಅನಾವರಣದ ಮುಂದೂಡಿಕೆ”
ಹಾಸನ ಜಿಲ್ಲೆಯ ಕಾಡಾನೆ ಸಮಸ್ಯೆಯನ್ನು ಉಲ್ಲೇಖಿಸಿ, “ನಮ್ಮ ಸರ್ಕಾರ ಇರುವಾಗ ರೈಲ್ವೆ ಬ್ಯಾರಿಕೇಡ್ ಹಾಕಲು ಹಣ ನೀಡಿತ್ತು. ಆದರೆ ಈ ಸರ್ಕಾರ ಬಂದ ಮೇಲೆ ಉಳಿದ ಹಣ ಬಿಡುಗಡೆ ಮಾಡಿಲ್ಲ. ಸತ್ತವರಿಗೆ ಪರಿಹಾರ ನೀಡಲು ಕೂಡ ಸರ್ಕಾರ ಹಿಂಜರಿಯುತ್ತಿದೆ.” ಎಂದು ದೂರಿದರು.
ಅರ್ಜುನನ ಪ್ರತಿಮೆ ಅನಾವರಣ ತಡವಾದುದು ಕೂಡ ಸರ್ಕಾರದ ವೈಫಲ್ಯವೆಂದ ಅವರು, “ಕೇರಳದಲ್ಲಿ ಯಾರಾದರೂ ಸತ್ತರೆ, ಬುಲೆಟ್ ಟ್ರೈನ್ ವೇಗದಲ್ಲಿ ಪರಿಹಾರ ನೀಡುತ್ತಾರೆ. ಆದರೆ ಇಲ್ಲಿ ಅರ್ಜುನನ ಪ್ರತಿಮೆಗೆ ಹಣ ನೀಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಪ್ಲಾಸ್ಟಿಕ್ ಮತ್ತು ಫೈಬರ್‌ನಿಂದ ಪ್ರತಿಮೆ ಮಾಡಬಾರದು, ಕಂಚಿನ ಪ್ರತಿಮೆ ಮಾಡಲಿ. ಇನ್ನಾದರೂ ಸರ್ಕಾರ ಹಣ ಬಿಡುಗಡೆ ಮಾಡಲಿ.” ಎಂದು ಒತ್ತಾಯಿಸಿದರು.
“ಈ ಸರ್ಕಾರ ಕ್ಷಮಿಸಬಹುದಾದ ಸರ್ಕಾರವಲ್ಲ”
ರಾಜ್ಯ ಸರ್ಕಾರವನ್ನು ತೀವ್ರ ಟೀಕಿಸಿದ ಅವರು, “ಈ ಸರ್ಕಾರ ಪಾಪರ್ ಸರ್ಕಾರ, ನಾಚಿಕೆಯಾಗಬೇಕು. ಜನರ ಪರ ಕೆಲಸ ಮಾಡುವ ಬದಲು ಹೂಡಿಕೆದಾರರು, ಜನರು ರಾಜ್ಯ ತೊರೆಯುವಂತೆ ಮಾಡುತ್ತಿದೆ. ಜನರು ಇವರನ್ನು ಸಮಯ ಬಂದಾಗ ಪಾಠ ಕಲಿಸಬೇಕಾಗುತ್ತದೆ.” ಎಂದು ಕಿಡಿಕಾರಿದರು.