ಮೈಸೂರು ಗಲಭೆ: ಮುಸ್ಲಿಮರ ಭಿಕ್ಷೆಯ ಋಣ ತೀರಿಸಲು ಕಾಂಗ್ರೆಸ್ ನಿಂದ ಪೊಲೀಸ್ ಇಲಾಖೆಗೆ ಅವಮಾನ: ಆರ್.ಅಶೋಕ್ ವಾಗ್ದಾಳಿ

ಹಾಸನ, ಫೆಬ್ರವರಿ 14: ಮೈಸೂರು ಗಲಭೆ ಪ್ರಕರಣದ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಕಲೇಶಪುರದಲ್ಲಿ ಮಾತನಾಡಿದ ಅವರು, “ಸರ್ಕಾರದ ಮಂತ್ರಿಮಂಡಲವೇ ಎರಡು ಬಣಗಳಾಗಿ ವಿಭಜನೆಗೊಂಡಿದೆ. ಒಂದು ಸಿದ್ದರಾಮಯ್ಯ ಬಣ, ಇನ್ನೊಂದು ಡಿ.ಕೆ.ಶಿವಕುಮಾರ್ ಬಣ.” ಎಂದು ಟೀಕಿಸಿದರು.

ಪೊಲೀಸರು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದಿದ್ದರೆ ಸ್ಟೇಷನ್ ಹೊತ್ತಿ ಉರಿಯುತ್ತಿತ್ತು:

ಮೈಸೂರು ಗಲಭೆಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆದಿರುವುದು ಸ್ಪಷ್ಟವಾಗಿದ್ದು, “ಪೊಲೀಸರು ಮುನ್ನೆಚ್ಚರಿಕೆಯಿಂದ ಕ್ರಮ ಕೈಗೊಂಡು ದೊಡ್ಡ ಅನಾಹುತ ತಪ್ಪಿಸಿದ್ದಾರೆ. ಇಲ್ಲದಿದ್ದರೆ ಇಡೀ ಪೊಲೀಸ್ ಸ್ಟೇಷನ್ ಹೊತ್ತಿ ಉರಿಯುತ್ತಿತ್ತು.” ಎಂದರು.

ಜಾಹೀರಾತು

“ಕಾಂಗ್ರೆಸ್ ಮುಸ್ಲಿಂರ ಭಿಕ್ಷೆಯಲ್ಲಿದೆ”

ರಾಜ್ಯ ಸರ್ಕಾರದ ನಿರ್ವಹಣೆಯನ್ನು ಕಟುವಾಗಿ ಟೀಕಿಸಿದ ಅವರು, “ಕಾಂಗ್ರೆಸ್ ನಾಯಕರು ಮುಸ್ಲಿಂ ಸಮುದಾಯದಿಂದ ಭಿಕ್ಷೆ ತೆಗೆದುಕೊಂಡು ಆ ಋಣ ತೀರಿಸಲು ಈಗ ಅವರ ಪರ ನಿಂತಿದ್ದಾರೆ.” ಎಂದು ಆರೋಪಿಸಿದರು. ಗಲಭೆ ಪ್ರಚೋದಿಸಿದ ವ್ಯಕ್ತಿಯನ್ನು ಪೊಲೀಸರು ಇದುವರೆಗೂ ಬಂಧಿಸದಿರುವುದನ್ನು ಖಂಡಿಸಿ, “ಅವನ್ಯಾವನೋ ಕಳ್ಳ ಏನು ಬೇಕಾದರೂ ಮಾತನಾಡಬಹುದು ಎಂಬಂತಾಗಿದೆ. ಬೆಂಕಿ ಹಚ್ಚಲು ಬೇಕಾದಷ್ಟು ಮಾತುಗಳನ್ನೂ ಹೇಳಿದ್ದಾರೆ.” ಎಂದರು.

“ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಲು ಸರ್ಕಾರ ಪ್ರಯತ್ನಿಸುತ್ತಿದೆ”

ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸುವಂತೆ ಮಾಡುವ ಬದಲು ಸರ್ಕಾರವೇ ಅವರ ವಿರುದ್ಧ ಕ್ರಮ ಕೈಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. “ಇಡೀ ಪ್ರಕರಣ ಮುಚ್ಚಿ ಹಾಕಲು ಸರ್ಕಾರ ಹುನ್ನಾರ ಮಾಡುತ್ತಿದೆ. ಕೊನೆಗೆ ಈ ಕೇಸಿನಲ್ಲಿ ಪೊಲೀಸರೇ ಅಪರಾಧಿಗಳಾಗುತ್ತಾರೆ. ಅವರನ್ನು ಸಸ್ಪೆಂಡ್ ಮಾಡುವ ಮಟ್ಟಕ್ಕೆ ಸರ್ಕಾರ ಮುಸ್ಲಿಂ ಸಮುದಾಯವನ್ನು ಓಲೈಸುತ್ತಿದೆ.” ಎಂದು ಅಶೋಕ್ ಆರೋಪಿಸಿದರು.

“ಸರ್ಕಾರ ಪೊಲೀಸರ  ಕ್ಷಮೆ ಕೇಳಬೇಕು”

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ ಅವರು, “ಈ ಸರ್ಕಾರ ಪೊಲೀಸರ ಮನೋಬಲ ಕುಗ್ಗಿಸಿದೆ. ಇಂತಹ ಸರ್ಕಾರ ನಾಚಿಕೆಯಾಗಬೇಕು. ಪೊಲೀಸ್ ಇಲಾಖೆ ಹಾಗೂ ಹಿರಿಯ ಅಧಿಕಾರಿಗಳಿಗೆ ಅವಮಾನ ಮಾಡಲಾಗಿದೆ.” ಸರ್ಕಾರ ಕೂಡಲೇ ಕ್ಷಮೆ ಕೇಳಬೇಕು, ಇಲ್ಲವಾದರೆ ಜನರ ಅಸಮಾಧಾನ ಭಾರಿ ತೀವ್ರತೆ ಪಡೆಯಲಿದೆ ಎಂದು ಎಚ್ಚರಿಸಿದರು.