ಆಪರೇಷನ್ ಕಮಲ; ಈ ಬಗ್ಗೆ ಮಾತನಾಡುವವರು ಹುಚ್ಚರು ಎಂದ ಶಿವಲಿಂಗೇಗೌಡ

ಮಂತ್ರಿಸ್ಥಾನ ಸಿಗದ, ಸಚಿವ ಸ್ಥಾನ ಸಿಗುವವರೆಗೂ ೨೫ ಮಂದಿ ಹಿರಿಯ ಶಾಸಕರನ್ನು ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ಮಾಡುವ ಬಗ್ಗೆ ಚರ್ಚೆ ;ನನಗೆ ಹೈಕಮಾಂಡ್ ಹೊರಿಸಿದ ಜವಾಬ್ದಾರಿ ನಿಭಾಯಿಸುವೆ.

ಅರಸೀಕೆರೆ: ಈ ರಾಜ್ಯದಲ್ಲಿ ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಆಪರೇಷನ್ ಕಮಲ ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಈ ಬಗ್ಗೆ ಮಾತನಾಡುವವರು ಹುಚ್ಚರು ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು.
ನಗರದ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಗೇನಾದ್ರೂ ೫೦ ಶಾಸಕರನ್ನು ಆಪರೇಷನ್ ಮಾಡಿದ್ರೆ, ಪ್ರಜಾಪ್ರಭುತ್ವಕ್ಕೆ ಅರ್ಥ ಇರುವುದಿಲ್ಲ. ಅದನ್ನು ವಿಸರ್ಜನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಆಪರೇಷನ್ ಕಮಲದ ಬಗ್ಗೆ ಮಾತನಾಡುವವರು ಅಕ್ಷರಶಃ ಹುಚ್ಚರು ಎಂದ ಕೆಎಂಶಿ, ಯಾವನೋ ಹೇಳಿದ ಎಂದು ಮಾತಾಡೋದು ಸರಿಯಲ್ಲ. ರಾಜ್ಯದಲ್ಲಿ ಅಪರೇಷನ್ ಕಮಲ ಆಗಲ್ಲ, ಅದೆಲ್ಲಾ ಊಹಾಪೋಹ ಎಂದರು.
ಆಪರೇಷನ್ ಕಮಲ ಎಂಬುದು ಸೋತಿರುವವರು, ಕೆಲಸ ಇಲ್ಲದವರು ಆಡುವ ಮಾತು ಎಂದು ವ್ಯಾಖ್ಯಾನಿಸಿದ ಕೈ ಶಾಸಕ, ಟಿವಿಯಲ್ಲಿ ಎಂಬ ಹುಚ್ಚು ಇದ್ದವರು ಕೂಗುಮಾರಿ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು. ಆಪರೇಷನ್ ಎಂಬುದು ಈ ಜನ್ಮದಲ್ಲಿ ಸಾಧ್ಯವಿಲ್ಲ. ೫೦ ಜನ ಪಕ್ಷಾಂತರ ಮಾಡಿದರೆ ಪ್ರಜಾಪ್ರಭುತ್ವವನ್ನೇ ವಿಸರ್ಜನೆ ಮಾಡಬೇಕಾಗುತ್ತದೆ. ಹಣ, ಅಧಿಕಾರದ ಆಸೆಗಾಗಿ ಅದಕ್ಕೆ ಒಳಗಾಗುವವರಿಗೆ ಆತ್ಮಗೌರವ ಇರಬೇಕು ಎಂದರು.
ಆಮಿಷಕ್ಕೆ ಬಲಿಯಾಗುವವರಿಗೆ ಮತದಾರರು, ಜನರು ಯಾವುದರಲ್ಲಿ ಹೊಡೀತಾರೋ ಗೊತ್ತಿಲ್ಲ ಎಂದ ಕೆಎಂಶಿ, ಆತ್ಮಸಾಕ್ಷಿ ಇದ್ದವರು ಯಾವುದೇ ಆಮಿಷಕ್ಕೆ ಬಲಿಯಾಗಲ್ಲ. ೫೦ ಜನ ಪಕ್ಷಾಂತರ ಮಾಡಿದರೆ ಪ್ರಜಾಪ್ರಭುತ್ವ ಏತಕ್ಕೆ, ಚುನಾವಣೆ ಏಕೆ ನಡೆಯಬೇಕು ಎಂದು ಪ್ರಶ್ನಿಸಿದರು.
ಜವಾಬ್ದಾರಿ ನಿಭಾಯಿಸುವೆ: ಚುನಾವಣೆ ಸಂದರ್ಭದಲ್ಲೇ ನಮ್ಮ ನಾಯಕರು ನನ್ನನ್ನು ಮಂತ್ರಿ ಮಾಡುವ ಭರವಸೆ ನೀಡಿದ್ದರು. ನನಗೆ ಹೈಕಮಾಂಡ್ ಹೊರಿಸಿದ ಜವಾಬ್ದಾರಿ ನಿಭಾಯಿಸುವೆ. ರಾಜ್ಯಾದ್ಯಂತ ಸಂಘಟನೆ ಮಾಡಿ ಕೆಲಸ ಮಾಡುವೆ. ನಮ್ಮ ನಾಯಕರು ಏನೇ ತೀರ್ಮಾನ ಮಾಡಿದರೂ ನಾನದಕ್ಕೆ ಬದ್ಧ. ಯಾವುದೇ ಕಾರಣಕ್ಕೂ ಅಪಸ್ವರಕ್ಕೆ ಎಡೆಯಿಲ್ಲ ಎಂದು ಹೇಳಿದರು.
ಸರ್ಕಾರ ರಚನೆ ನಂತರ ಮೊದಲ ಪಟ್ಟಿಯಲ್ಲೇ ನನ್ನ ಹೆಸರು ಇರಲಿದೆ ಎಂದು ಹೇಳಲಾಗಿತ್ತು. ಅದು ಆಗಲಿಲ್ಲ. ಹಾಸನದಲ್ಲಿ ನಡೆದ ಕೆಂಪೇಗೌಡ ಜಯಂತಿ ಬಹಿರಂಗ ಕಾರ್ಯಕ್ರಮದಲ್ಲೇ ಸ್ವತಃ ಸಿಎಂ ಅವರೇ ಮಂತ್ರಿ ಮಾಡುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಈ ವಾರದಲ್ಲಿ ಆಗಲಿದೆ:
ಮಂತ್ರಿಸ್ಥಾನ ಸಿಗದ, ಸಚಿವ ಸ್ಥಾನ ಸಿಗುವವರೆಗೂ ೨೫ ಮಂದಿ ಹಿರಿಯ
ಶಾಸಕರನ್ನು ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ಮಾಡುವ ಬಗ್ಗೆ ಚರ್ಚೆ ನಡೆದಿದ್ದು, ತೀರ್ಮಾನ ಸಹ ಆಗಿದೆ. ಮುಂದಿನ ೧ ವಾರದೊಳಗೆ ಈ ಬಗ್ಗೆ ತೀರ್ಮಾನ ಆಗಲಿದೆ ಎಂದು ಶಾಸಕರು ಹೇಳಿದರು. ಆದರೆ ಯಾರಿಗೆಲ್ಲಾ ಹುದ್ದೆ ಎಂಬುದು ಗೊತ್ತಿಲ್ಲ ಎಂದರು. ಈ ವಿಚಾರದಲ್ಲಿ ಹೈಕಮಾಂಡ್ ಏನು ತೀರ್ಮಾನ ಮಾಡುವುದೋ ಅದಕ್ಕೆ ಬದ್ಧನಾಗಿರುವೆ ಎಂದು ಹೇಳಿದರು.

ನಾನು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರುವಾಗ, ನಮ್ಮ ಸರ್ಕಾರ ಬಂದರೆ ನಿನ್ನನ್ನು ಮಂತ್ರಿ ಮಾಡುವುದಾಗಿ ಸಿದ್ರಾಮಣ್ಣ, ಡಿ.ಕೆ.ಶಿವಕುಮಾರ್, ಸುರ್ಜೇವಾಲಾ ಮೂವರೂ ಭರವಸೆ ನೀಡಿದ್ದರು. ಇಂದಲ್ಲ ನಾಳೆ ಅವರ ಭರವಸೆ ಈಡೇರಬಹುದು ಎಂಬ ನಿರೀಕ್ಷೆ ಹೊಂದಿದ್ದೇನೆ.
-ಕೆ.ಎಂ. ಶಿವಲಿಂಗೇಗೌಡ , ಕಾಂಗ್ರೆಸ್  ಶಾಸಕ