ಡಿವೈಎಸ್ಪಿ ಖಾತೆಗೇ ಕನ್ನ ಹಾಕಿ 16 ಲಕ್ಷ ರೂ. ದೋಚಿದ ಆನ್ ಲೈನ್ ಕಳ್ಳರು!

ಖಾತೆಗಳಿಂದ ಹಣ ಕಡಿತವಾದ ಸಂದೇಶಗಳಿಂದ ಎಚ್ಚೆತ್ತ ಅಧಿಕಾರಿಯಿಂದ ಸೆನ್ ಠಾಣೆಗೆ ದೂರು

ಹಾಸನ: ಜನಸಾಮಾನ್ಯರು ಆನ್ ಲೈನ್ ವಂಚಕರ ಬಲೆಗೆ ಬಿದ್ದು ಬ್ಯಾಂಕ್ ಖಾತೆಯಲ್ಲಿನ ಹಣ ಕಳೆದುಕೊಂಡು ಪೊಲೀಸರ ಮೊರೆ ಹೋಗುವುದನ್ನು ದಿನನಿತ್ಯ ಕೇಳುತ್ತೇವೆ. ಆದರೆ ಇಲ್ಲಿ ಖದೀಮರು ಡಿವೈಎಸ್ಪಿ ದರ್ಜೆಯ ಅಧಿಕಾರಿಯ ಖಾತೆಗೆ ಕನ್ನ ಹಾಕಿ 16 ಲಕ್ಷ ರೂ. ಎಗರಿಸಿದ್ದಾರೆ!

ಹೌದು, ಹಾಸನ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರ ಬ್ಯಾಂಕ್ ಖಾತೆಗಳಿಂದ ಅಪರಿಚಿತ ಖದೀಮರು ತಮ್ಮ ಬ್ಯಾಂಕ್ ಖಾತೆಗಳಿಗೆ 15,98,761 ರೂ. ಹಣವನ್ನು ವರ್ಗಾವಣೆ ಮಾಡಿಕೊಂಡು ವಂಚನೆ ಮಾಡಿದ್ದಾರೆ.

ಈ ಸಂಬಂಧ ಡಿವೈಎಸ್ಪಿ ಪಿ.ಕೆ.ಮುರಳೀಧರ್ ಅವರು ನಗರದ ಸಿಇಎನ್ ಠಾಣೆಗೆ ನಿನ್ನೆ ದೂರು ನೀಡಿದ್ದಾರೆ. ಅವರು, ಕೆನರಾಬ್ಯಾಂಕ್ ನ ಮಡಿಕೇರಿ ಮುಖ್ಯ ಶಾಖೆ ಹಾಗೂ ಭಾಗಮಂಡಲ ಶಾಖೆಯಲ್ಲಿ ಖಾತೆಗಳನ್ನು ಹೊಂದಿದ್ದಾರೆ. ಮೇ 20 ರಂದು ಮಧ್ಯಾಹ್ನ 1.30ಕ್ಕೆ ಅವರ ಮೊಬೈಲ್ ಗೆ ಬಂದ ಬ್ಯಾಂಕ್ ಎಸ್ಸೆಮ್ಮೆಸ್ ಗಳಿಂದ ಅವರ ಖಾತೆಯಿಂದ ಹಣ ವರ್ಗಾವಣೆಯಾಗಿರುವ ವಿಷಯ ಗೊತ್ತಾಗಿದೆ.

ಬೆಳಗ್ಗೆ 10.28 ರಿಂದ ಮಧ್ಯಾಹ್ನ 12.56ರವರೆಗೆ 10 ವರ್ಗಾವಣೆಗಳ ಮೂಲಕ ಹಣ ಅಪರಿಚಿತ ವಂಚಕರ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗಿದೆ. ಖದೀಮರನ್ನು ಪತ್ತೆ ಮಾಡಿ ತಮ್ಮ ಹಣ ವಾಪಸ್ ಕೊಡಿಸುವಂತೆ ಡಿವೈಎಸ್ಪಿ ಸೆನ್ ಠಾಣೆಗೆ ದೂರು ನೀಡಿದ್ದು, ತನಿಖೆ ಆರಂಭವಾಗಿದೆ.