ಹಾಸನ: ಖಾಸಗಿ ಬಸ್ ಹಾಗೂ ಅಲ್ಟೋ ಕಾರು ನಡುವೆ ಸಂಭವಿಸಿದ ಭೀಕರ ಡಿಕ್ಕಿಯಲ್ಲಿ ಕಾರಿನಲ್ಲಿದ್ದ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು, ಉಳಿದ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ.
ಚನ್ನರಾಯಪಟ್ಟಣ ತಾಲ್ಲೂಕಿನ ಬೀರೂರು ಗೇಟ್ ಬಳಿ ದುರ್ಘಟನೆ ನಡೆದಿದೆ. ಕೆ.ಆರ್.ಪೇಟೆ ತಾಲ್ಲೂಕಿನ ಕಾಗೇಪುರ ಗ್ರಾಮದ ಶಿವಕುಮಾರ (46) ಮೃತರು.
ಚನ್ನರಾಯಪಟ್ಟಣದಿಂದ ಮುಂಬೈಗೆ ತೆರಳುತ್ತಿದ್ದ ಕಾವೇರಿ ಖಾಸಗಿ ಬಸ್ ಹಾಗೂ ಅರಸೀಕೆರೆ ಕಡೆಯಿಂದ ಬರುತ್ತಿದ್ದ KA-19-B-5207 ನಂಬರ್‌ನ ಅಲ್ಟೋ ಕಾರು ನಡುವೆ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಶಿವಕುಮಾರ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.ಗಾಯಗೊಂಡ ಉಳಿದ ನಾಲ್ವರನ್ನು ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಳಕ್ಕೆ ಚನ್ನರಾಯಪಟ್ಟಣ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.