ಬೆಂಗಳೂರು: ಕರ್ನಾಟಕ ಸಂಭ್ರಮ-೫೦ರ ಅಭಿಯಾನದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ೫೦ ಮಹಿಳಾ ಮತ್ತು ೫೦ ಪುರುಷ ಸಾಧಕರಿಗೆ ರಾಜ್ಯ ಸರ್ಕಾರ ಸುವರ್ಣ ಮಹೋತ್ಸವ ಪ್ರಶಸ್ತಿ ಪ್ರಕಟಿಸಿದೆ.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಒಟ್ಟು ೧೦೦ ಮಂದಿ ಸಾಧಕರನ್ನು ೨೦೨೪ನೇ ಸಾಲಿನಲ್ಲಿ ಗುರುತಿಸಿ ಅವರಿಗೆ ಸುವರ್ಣ ಮಹೋತ್ಸವ ಪ್ರಶಸ್ತಿ ನೀಡಿ ಗೌರವಿಸಲು ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.
ಇಷ್ಟೂ ಮಂದಿ ಸಾಧಕರಿಗೆ ಸುವರ್ಣ ಮಹೋತ್ಸವ ಆಚರಣೆ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ನೀಡಲು ಸರ್ಕಾರ ಹರ್ಷಿಸುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನ ಕಾರ್ಯದರ್ಶಿ ಎಸ್.ಗೀತಾಬಾಯಿ ತಿಳಿಸಿದ್ದಾರೆ.
ಪ್ರಶಸ್ತಿ ಪುರಸ್ಕೃತರಲ್ಲಿ ಜಾನಪದ, ವೈದ್ಯಕೀಯ ಮಾಧ್ಯಮ ಪರಿಸರ, ಯಕ್ಷಗಾನ, ಶಿಲ್ಪಕಲೆ, ರಂಗಭೂಮಿ, ಛಾಯಾಚಿತ್ರ, ಸಂಗೀತ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ರಾಜ್ಯಾದ್ಯಂತ ಸಾಧನೆ ಮಾಡಿದವರಿಗೆ ಮನ್ನಣೆ ನೀಡಲಾಗಿದೆ.
ಅಂತೆಯೇ ಹಾಸನ ಜಿಲ್ಲೆಯಿಂದ ಮಾಧ್ಯಮ ಕ್ಷೇತ್ರದಿಂದ ಹಿರಿಯ ಪತ್ರಕರ್ತರು ಹಾಗೂ ಜನಮಿತ್ರ ಪ್ರಾದೇಶಿಕ ದಿನಪತ್ರಿಕೆ ಪ್ರಧಾನ ಸಂಪಾದಕರಾದ ಹೆಚ್.ಬಿ.ಮದನಗೌಡ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಾಹಿತ್ಯ ಕ್ಷೇತ್ರದಿಂದ ಹಿರಿಯ ಲೇಖಕಿ ಹಾಗೂ ಮಹಿಳಾ ಹೋರಾಟಗಾರ್ತಿ ಡಾ.ಬಾನು ಮುಷ್ತಾಕ್ ಅವರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿದೆ.