ನಾನು ಭ್ರಷ್ಟನಲ್ಲ, ಲಂಚ ಸ್ವೀಕರಿಸುವುದಿಲ್ಲ; ವೈರಲ್‌ ಆಗಿದೆ ಬಿಇಒ ಕಚೇರಿ ಅಧೀಕ್ಷಕರ ಟೇಬಲ್‌ ಬೋರ್ಡ್!

ಇಂತಹ ಅಧಿಕಾರಿಗಳ ಸಂತಾನ ಸಾವಿರವಾಗಿಲಿ

ಹಾಸನ: ಸರ್ಕಾರಿ ಅಧಿಕಾರಿಗಳೆಲ್ಲ ಭ್ರಷ್ಟರು ಎನ್ನುವಷ್ಟು ವ್ಯವಸ್ಥೆ ಹದಗೆಟ್ಟಿರುವ ಈ ಸಂದರ್ಭದಲ್ಲಿ ತನ್ನನ್ನು ತಾನು ಭ್ರಷ್ಟನಲ್ಲ ಎಂದು ಸಾರ್ವಜನಿಕವಾಗಿ ಘೋಷಿಸಿಕೊಳ್ಳಲು ಅಧಿಕಾರಿಗಳಲ್ಲಿ ಪ್ರಾಮಾಣಿಕತೆ ರಕ್ತಗತವಾಗಿರಬೇಕಾಗುತ್ತದೆ.
ಬಹಳಷ್ಟು ಸರ್ಕಾರಿ ನೌಕರರು ಪೋಸ್ಟಿಂಗ್‌, ಬಡ್ತಿ ಮುಂತಾದ ಕಾರಣಗಳಿಗಾಗಿ ರಾಜಕಾರಣಿಗಳನ್ನು ಮೀರಿಸುವ ಮಟ್ಟಿಗೆ ಅಡ್ಜಸ್ಟ್‌ ಮೆಂಟ್ ಗೆ ಶರಣಾಗಿರುವಾಗ ಹಾಸನದಲ್ಲಿನ ಅಧಿಕಾರಿಯೊಬ್ಬರ ಟೇಬಲ್‌ ಮೇಲಿನ ಫಲಕವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
ಹಾಸನ ಬಿಇಒ ಕಚೇರಿಯ ಅಧೀಕ್ಷರಾಗಿರುವ ಡಿ.ಎಸ್.ಲೋಕೇಶ್‌ ಅವರ ಟೇಬಲ್‌ ಮೇಲೆ ನಾನು ಭ್ರಷ್ಟನಲ್ಲ, ಇಲ್ಲಿ ಲಂಚ ಸ್ವೀಕರಿಸುವುದಿಲ್ಲ ಎನ್ನುವ ಬೋರ್ಡ್‌ ಇರಿಸಿದ್ದಾರೆ.
ಈ ಹಿಂದೆ ತಮ್ಮ ಪ್ರಾಮಾಣಿಕತೆ ಹಾಗೂ ದಕ್ಷತೆಯ ಕಾರಣಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಸನ ಸಂಸದರಾಗಿದ್ದ ಅವಧಿಯಲ್ಲಿ ಅವರ ಕಚೇರಿಯ ಆಪ್ತ ಕಾರ್ಯದರ್ಶಿಯಾಗಿ ಹಾಗೂ ಕಳೆದ ಅವಧಿಯಲ್ಲಿ ಹಾಸನ ಕ್ಷೇತ್ರದ ಶಾಸಕ ಪ್ರೀತಂ ಜೆ.ಗೌಡರ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುವ ಅವಕಾಶ ಪಡೆದಿದ್ದ ಡಿ.ಎಸ್.ಲೋಕೇಶ್‌ ಎಂದಿಗೂ ತಮ್ಮ ವಿರುದ್ಧ ಆರೋಪಗಳು ಕೇಳಿ ಬರುವ ಅವಕಾಶ ನೀಡದಂತೆ ಕಾರ್ಯನಿರ್ವಹಿಸುತ್ತಾ ಜನಸ್ನೇಹಿಯಾಗಿ ಗುರುತಿಸಿಕೊಂಡಿದ್ದಾರೆ.
ಈಚೆಗೆ ಬಿಇಒ ಕಚೇರಿ ಅಧೀಕ್ಷಕರಾಗಿ ಬಡ್ತಿ ಹೊಂದಿರುವ ಅವರು ತಾವು ಪ್ರಾಮಾಣಿಕ ಎಂದು ಎದೆತಟ್ಟಿ ಹೇಳಿಕೊಳ್ಳುವ ಧೈರ್ಯ ಪ್ರದರ್ಶಿಸಿದ್ದು, ಅವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಸಾರ್ವಜನಿಕರು ಇಂತಹ ಅಧಿಕಾರಿಗಳ ಸಂತಾನ ಸಾವಿರವಾಗಿಲಿ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.