ಹೊಳೆನರಸೀಪುರ: ಸಂಸದ ಹಾಗೂ ಪುತ್ರ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿ ಬಂದಿರುವ ಪೆನ್‌ಡ್ರೈವ್ ಹಗರಣದ ಮುಜುಗರ ಒಂದೆಡೆ, ಮತ್ತೊಂದೆಡೆ ಎಫ್ಐಆರ್ ಸಂಕಷ್ಟಕ್ಕೆ ಸಿಲುಕಿರುವ ರೇವಣ್ಣ, ಮನಃಶಾಂತಿಗಾಗಿ ದೇವರ ಮೊರೆ ಹೋದರು. ಪಟ್ಟಣದ ತಮ್ಮ ಮನೆಯಲ್ಲಿ ಬುಧವಾರ ಹೋಮ-ಹವನ ಮಾಡಿಸಿ ವಿಶೇಷ ಪೂಜೆ ಸಲ್ಲಿಸಿದರು.
ಮನೆಯೊಳಗೇ ಹೋಮ ಕುಂಡ ನಿರ್ಮಿಸಿ ಬೆಳಗ್ಗೆಯಿಂದ ಮನೆಯೊಳಗೆ ಪೂಜೆ, ಪುನಸ್ಕಾರ, ಪೂರ್ಣಾಹುತಿ ನೆರವೇರಿಸಿದರು. ತನಗೆ ಹಾಗೂ ಕುಟುಂಬಕ್ಕೆ ಎದುರಾಗಿರುವ ಸಂಕಷ್ಟ ನಿವಾರಿಸು ದೇವರೇ ಎಂದು ರೇವಣ್ಣ ಮೊರೆಯಿಟ್ಟರು.
ಬೆಂಗಳೂರಿಗೆ ಪಯಣ: ಮಧ್ಯಾಹ್ನದ ವೇಳೆಗೆ ರೇವಣ್ಣ ಹಾಗೂ ಭವಾನಿ ಅವರು ಪಟ್ಟಣದ ನಿವಾಸದಿಂದ ಬೆಂಗಳೂರು ಕಡೆಗೆ ಹೊರಟರು. ಆದರೆ ಹೋಗುವಾಗ ಇಬ್ಬರೂ ಬೇರೆ ಬೇರೆ ಕಾರಿನಲ್ಲಿ ತೆರಳಿದರು.
ಈ ವೇಳೆ ಮಾತನಾಡಿದ ರೇವಣ್ಣ, ಎಸ್‌ಐಟಿ ಅವರು ಮನೆಗೆ ನೋಟಿಸ್ ಅಂಟಿಸಿದ್ದಾರೆ. ಅದರಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳುತ್ತೇನೆ. ನಂತರ ಏನು ಮಾಡಬೇಕು ಎಂದು ತೀರ್ಮಾನಿಸಲಾಗುವುದು.
ತನಿಖೆಗೆ ಎಲ್ಲಾ ರೀತಿಯಲ್ಲೂ ಸಹಕರಿಸುತ್ತೇವೆ. ನಾನು ಯಾವುದೇ ತಪ್ಪು ಮಾಡಿಲ್ಲ. ಶಕ್ತಿ ಇದೆ, ಎಲ್ಲವನ್ನೂ ಎದುರಿಸುತ್ತೇನೆ, ಎಲ್ಲ ಸರಿ ಹೋಗಲಿದೆ ಎಂದರು.
ಅಷ್ಟೇ ಅಲ್ಲ ಈ ಎಲ್ಲಾ ಆರೋಪಗಳ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ. ನಾನು ಯಾವುದೇ ತನಿಖೆ ಎದುರಿಸಲು ಸಿದ್ಧ, ಆ ಶಕ್ತಿ ಇದೆ ಎಂದು ಪುನರುಚ್ಛರಿಸಿ ಮುಂದೆ ಸಾಗಿದರು.
ನಾಳೆ ರೇವಣ್ಣ ಎಸ್‌ಐಟಿ ಮುಂದೆ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ. ಅದಕ್ಕೂ ಮುನ್ನ ನ್ಯಾಯಾಲಯದಿಂದ ತಡೆ ಪಡೆಯಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಬಿಕೋ ಎನ್ನುತ್ತಿದೆ ಮನೆ:
ತಡ ರಾತ್ರಿ ಬೆಂಗಳೂರಿನಿಂದ ಆಗಮಿಸಿ ಪಟ್ಟಣದ ತಮ್ಮ ನಿವಾಸದಲ್ಲಿ ರೇವಣ್ಣ ದಂಪತಿ ವಾಸ್ತವ್ಯ ಹೂಡಿದ್ದರು. ಆದರೆ ಪ್ರತಿನಿತ್ಯ ಜನರಿಂದ ತುಂಬಿ ತುಳುಕುತ್ತಿದ್ದ ರೇವಣ್ಣ ನಿವಾಸ ಹಾಗೂ ಹೊರಾಂಗಣ ಪೆನ್‌ಡ್ರೈವ್ ಪ್ರಕರಣ ಹೊರ ಬಂದ ನಂತರ ಖಾಲಿ ಖಾಲಿ ಹೊಡೆಯುತ್ತಿದೆ. ಅದರಲ್ಲೂ ಇಂದು ಯಾರೊಬ್ಬರೂ ಮನೆಯ ಬಳಿ ಇರಲಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ರೇವಣ್ಣಗೆ ಬೆಂಗಾವಲು ರಕ್ಷಣೆ ಜೊತೆಗೆ ಪೊಲೀಸ್ ಭದ್ರತೆಯನ್ನೂ ಒದಗಿಸಲಾಗಿದೆ.