ಹಾಸನ: ವಿಜಯದಶಮಿ ಅಂಗವಾಗಿ ಶನಿವಾರ ಸಂಜೆ ಸಾಲಗಾಮೆ ರಸ್ತೆಯ ಬನ್ನಿಮಂಟಪದಲ್ಲಿ ಶಾಸಕ ಹೆಚ್.ಪಿ. ಸ್ವರೂಪ್, ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ ಹಾಗೂ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಪ್ರದಾಯದಂತೆ ತಳವಾರ ಮನೆತನದ ನರಸಿಂಹರಾಜ ಅರಸ್ ಬನ್ನಿ ಕಡಿಯುವ ಮೂಲಕ ನಗರದಲ್ಲಿ ನವರಾತ್ರಿ ಆಚರಣೆ ಸಂಪನ್ನಗೊಂಡಿತು.
ಸಂಪ್ರದಾಯದಂತೆ ಶ್ರೀ ಮೈಲಾರಲಿಂಗೇಶ್ವರ, ಚನ್ನಕೇಶವ, ವಿರೂಪಾಕ್ಷ, ಆಂಜನೇಯ ಸ್ವಾಮಿ ಹಾಗೂ ಸಿದ್ಧೇಶ್ವರ ದೇವಾಲಯಗಳಿಂದ ಉತ್ಸವ ಮೂರ್ತಿಗಳನ್ನು ಹಾಸನಾಂಬ ವೃತ್ತದಿಂದ ಮೆರವಣಿಗೆ ಮೂಲಕ ಬನ್ನಿ ಮಂಟಪಕ್ಕೆ ಕರೆತರಲಾಯಿತು.
ಐದು ಉತ್ಸವ ಮೂರ್ತಿಗಳ ಅಡ್ಡೆಯನ್ನು ಮಂಟಪದಲ್ಲಿರಿಸಿ ಪೂಜೆ ಸಲ್ಲಿಸಿದ ನಂತರ ನರಸಿಂಹರಾಜ ಅರಸ್ ಬಾಳೆಕಂದು ಕಡಿದರು. ಈ ವೇಳೆ ಜನರು ಬನ್ನಿ ಸಂಗ್ರಹಕ್ಕೆ ಮುಗಿಬಿದ್ದಿದ್ದರಿಂದ ನೂಕುನುಗ್ಗಲು ಉಂಟಾಯಿತು.
ಇದಕ್ಕೂ ಮೊದಲು ಮೆರವಣಿಗೆ ವೇಳೆ ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ಪೊಲೀಸರು ಸಂಚಾರ ನಿಯಂತ್ರಿಸಿ ಉತ್ಸವ ತೆರಳಲು ವ್ಯವಸ್ಥೆ ಮಾಡಿಕೊಟ್ಟರು. ದೇವರ ಅಡ್ಡಪಲ್ಲಕ್ಕಿ ತೆರಳುವ ಮಾರ್ಗದಲ್ಲಿ ಸಾರ್ವಜನಿಕರು ರಸ್ತೆ ಸ್ವಚ್ಛಗೊಳಿಸಿ, ರಂಗೋಲಿಗಳಿಂದ ಸಿಂಗರಿಸಿದ್ದರು.
ಶಾಸಕ ಎಚ್.ಪಿ. ಸ್ವರೂಪ್ ನೆರದ ಸಾರ್ವಜನಿಕರಿಗೆ ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಶುಭಾಶಯ ಕೋರಿದರು. ನರಸಿಂಹರಾಜ ಅರಸ್ ಮಾತನಾಡಿ, ಕಳೆದ 34 ವರ್ಷಗಳಿಂದಲೂ ಬನ್ನಿ ಕಡಿಯುವ ಸಂಪ್ರದಾಯವನ್ನು ನಾನು ಮುಂದಿವರಿಸಿದ್ದೇನೆ ಎಂದರು.