ಜಮೀನಿಗೆ ಬಿದ್ದ ಬೆಂಕಿ ನಂದಿಸಲು‌ ಹೋಗಿ ಅಗ್ನಿಗಾಹುತಿಯಾದ ರೈತ ಮಹಿಳೆ

ಹಾಸನ: ಜಮೀನಿಗೆ ಬಿದ್ದ ಬೆಂಕಿ ಆರಿಸಲು ಹೋದ ರೈತ ಮಹಿಳೆ ಅಗ್ನಿಗಾಹುತಿಯಾಗಿರುವ ಘಟನೆ ಆಲೂರು ತಾಲ್ಲೂಕಿನ, ಹಾಚಗೋಡನಹಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.

ರತ್ನಮ್ಮ (63) ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಾವನ್ನಪ್ಪಿದ ರೈತ ಮಹಿಳೆ.

ನಿನ್ನೆ ರಾತ್ರಿ ತಮ್ಮ ಜಮೀನಿಗೆ ಬೆಂಕಿ ಬಿದ್ದ ವಿಷಯ ತಿಳಿದು ಸ್ಥಳಕ್ಕೆ ತೆರಳಿದ್ದ ರತ್ನಮ್ಮ ಅವರ ಕಣ್ಣೆದುರು ಬೆಳೆ ಹೊತ್ತಿ ಉರಿಯುತ್ತಿತ್ತು. ಅದನ್ನು ಉಳಿಸಿಕೊಳ್ಳಲು
ಬೆಂಕಿ ನಂದಿಸಲು ಮುಂದಾದರು. ಆದರೆ ಅವರಿದ್ದ ಜಾಗಕ್ಕೆ ಬೆಂಕಿಯ ಕೆನ್ನಾಲಿಗೆ ವೇಗವಾಗಿ ಹರಡಿದ್ದರಿಂದ ಅವರು ಅಗ್ನಿಜ್ವಾಲೆಗೆ ಸಿಲುಕಿಕೊಂಡರು.

ಅಲ್ಲಿಂದ ಹೊರಬರಲಾರದೆ ಬೆಂಕಿ ಹೊತ್ತಿಕೊಂಡು ಸ್ಥಳದಲ್ಲೇ ಮೃತಪಟ್ಟರು. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಲೂರು ಆಸ್ಪತ್ರೆಗೆ ರವಾನಿಸಲಾಯಿತು.

ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದರು. ಜಿಲ್ಲೆಯಲ್ಲಿ ಒಂದೇ ವಾರದಲ್ಲಿ ಜಮೀನಿಗೆ ಹೊತ್ತಿಕೊಂಡ ಬೆಂಕಿ ಆರಿಸಲು ಹೋಗಿ ಜೀವ ಕಳೆದುಕೊಂಡ ಎರಡನೇ ಪ್ರಕರಣ ಇದಾಗಿದೆ.