ಗುಂಡು ಹಾರಿಸಿ ಪತ್ನಿಯನ್ನು ಕೊಂದು ನೇಣಿಗೆ ಶರಣಾದ ಪತಿ: ಗಂಡ-ಹೆಂಡತಿ ಪ್ರಾಣ ಬಲಿ ಪಡೆದ ಕೌಟುಂಬಿಕ ಕಲಹ

ಹಾಸನ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಗೆ ನಾಡ ಬಂದೂಕಿನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ ಪತಿ ತಾನೂ ತಾನು ಆತ್ಮಹತ್ಯೆಗೆ ಶರಣಾದ ಘಟನೆ ಬೇಲೂರು ತಾಲ್ಲೂಕಿನ, ದೊಡ್ಡಸಾಲಾವರ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.

ಹರೀಶ್ ಪೂಜಾರಿ (50), ತನ್ನ ಪತ್ನಿ ಜಾಜಿ (45) ಅವರನ್ನು ಕೊಂದು ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪ್ರತಿನಿತ್ಯ ಒಂದಲ್ಲ ಒಂದು ಕಾರಣಕ್ಕೆ ಜಗಳವಾಡುತ್ತಿದ್ದ ಪತಿ-ಪತ್ನಿಯ ಜಗಳ ನಿನ್ನೆ ರಾತ್ರಿ ವಿಕೋಪಕ್ಕೆ ತಿರುಗಿದೆ. ವಾಗ್ವಾದದಿಂದ ತೀವ್ರವಾಗಿ ಆಕ್ರೋಶಗೊಂಡ ಹರೀಶ್ ಮನೆಯಲ್ಲಿಯೇ ಪತ್ನಿಗೆ ನಾಡ ಬಂದೂಕಿನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ನಂತರ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದಂಪತಿಗೆ ಮೂವರು ಮಕ್ಕಳಿದ್ದು ಎಲ್ಲರೂ ಬೇರೆ ಊರುಗಳಲ್ಲಿ ವ್ಯಾಸಂಗ ಮಾಡುತ್ತಿದ್ದು ಮನೆಯಲ್ಲಿ ಗಂಡ-ಹೆಂಡತಿ ಇಬ್ಬರೇ ಇದ್ದರು. ಗುಂಡಿನ ಶಬ್ದ ಕೇಳಿದ್ದರಿಂದ ಸ್ಥಳೀಯರು ಬಂದು ನೋಡಿದಾಗ ವಿಷಯ ತಿಳಿದಿದೆ.

ಸ್ಥಳಕ್ಕೆ ಅರೇಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.