ತ್ರಿಬ್ಬಲ್ ರೈಡಿಂಗ್ ಬೈಕ್ ಗೆ ಪಿಕಪ್ ಡಿಕ್ಕಿ; ಅಸ್ಸಾಂ ಮೂಲದ ಇಬ್ಬರು ವಲಸೆ ಕಾರ್ಮಿಕರ ಸಾವು

ಅರಕಲಗೂಡು: ತಾಲೂಕಿನ ಮಾದಿಹಳ್ಳಿ- ಬರಗೂರು ನಡುವೆ ಶನಿವಾರ ಚಲಿಸುತ್ತಿದ್ದು ಬೈಕ್ ಮತ್ತು ಟಾಟಾ ಪಿಕಪ್ ವಾಹನದ ನಡುವೆ ಮುಖಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಬೈಕ್ ಸವಾರರು ಮೃತಪಟ್ಟು ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ಅಸ್ಸಾಂ ಮೂಲದ ವಲಸೆ ಕಾರ್ಮಿಕರಾದ ಕಾಸೀಂ (35) ಸ್ಥಳದಲ್ಲೇ ಮೃತಪಟ್ಟಿದ್ದು, ಹಾಲಿಂ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವಿಗೀಡಾಗಿದ್ದಾರೆ. ಬೈಕ್‌ನಲ್ಲಿದ್ದ ಮತ್ತೋರ್ವ ಮೆರದುಲ್ ತೀವ್ರವಾಗಿ ಗಾಯಗೊಂಡಿದ್ದು ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಾಸನ- ಪಿರಿಯಾಪಟ್ಟಣ ಮಾರ್ಗದ ರಸ್ತೆಯಲ್ಲಿ ಬರಗೂರು ಕಡೆಯಿಂದ ಬೈಕ್‌ನಲ್ಲಿ ಹೋಗುತ್ತಿದ್ದಾಗ ಅರಕಲಗೂಡು ಕಡೆಯಿಂದ ಬಂದ ಟಾಟಾ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ. ಕಾಸೀಂ ಸ್ಥಳದಲ್ಲೇ ಮೃತಪಟ್ಟಿದ್ದು ದೇಹದ ತಲೆಭಾಗ ಛಿದ್ರಗೊಂಡಿತ್ತು.

ಶವಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದೆ. ಅರಕಲಗೂಡು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.