ಕುಡಿದು ಅಡ್ಡಾದಿಡ್ಡಿ ಕಾರು ಚಾಲನೆ: ಆವಾಜ್ ಹಾಕಿದವನಿಗೆ ಬಸ್ ಪ್ರಯಾಣಿಕರು, ಚಾಲಕನಿಂದ ಧರ್ಮದೇಟು

ಬಸ್ ಗೆ ಕಾರು ಅಡ್ಡ ನಿಲ್ಲಿಸಿ ಆವಾಜ್ ಹಾಕಿದವನಿಗೆ ಗೂಸಾ

ಹಾಸನ: ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿ ಸಾರಿಗೆ ಬಸ್‌ಗೆ ಅಡ್ಡಲಾಗಿ ಕಾರು ನಿಲ್ಲಿಸಿ ಆವಾಜ್ ಹಾಕಿದವನಿಗೆ ಬಸ್ ಚಾಲಕ ಹಾಗೂ ಪ್ರಯಾಣಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಆಲೂರು ತಾಲೂಕು ಬೈರಾಪುರ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಿನ್ನೆ ರಾತ್ರಿ ನಡೆದಿದೆ.

ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಸಾರಿಗೆ ಬಸ್ ಗೆ ಎದುರಿನಿಂದ ಬಂದ ಕಾರ್ ನ ಚಾಲಕ ಕಾರನ್ನು ಅಡ್ಡಲಾಗಿ ನಿಲ್ಲಿಸಿ ಚಾಲಕನನ್ನು ನಿಂದಿಸಿದ.

ಇದಕ್ಕೆ ಪ್ರತಿಯಾಗಿ ಬಸ್ ನ ಕೆಲವು ಪ್ರಯಾಣಿಕರನ್ನು ಕೆಳಗಿಳಿದು ಕಾರು ಚಾಲಕನನ್ನು ನಿಂದಿಸಿದರು. ಕಾರಿನಿಂದ ಇಳಿದೂ ಆವಾಜ್ ಹಾಕುತ್ತಿದ್ದ ಆತನನ್ನು ಬಸ್ ಒಳಗೆ ಕರೆತಂದ ಪ್ರಯಾಣಿಕರು ಧರ್ಮದೇಟು ನೀಡಿದರು. ಅಲ್ಲದೇ ಕುಡಿದು ಬಂದು ಕಾರು ಓಡಿಸುತ್ತಿದ್ದೀಯಾ ಎಂದು ಬಸ್ ಚಾಲಕ ಕೂಡ ಥಳಿಸಿದರು. ನಂತರ ಆತನನ್ನು ಕೆಳಗಿಳಿಸಿ ಬಸ್ ಮುಂದೆ ಚಲಿಸಿದೆ.

ಈ ದೃಶ್ಯಗಳನ್ನು ಬಸ್ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.