ಹಾಸನ: ಪ್ರೀತಿಸಲು ನಿರಾಕರಿಸಿದ ಹತ್ತನೇ ತರಗತಿ ವಿದ್ಯಾರ್ಥಿನಿಯ ಕತ್ತು ಸೀಳಿ ಬರ್ಬರ ಹತ್ಯೆ ಮಾಡಿದ ಯುವಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅರಸೀಕೆರೆ ತಾಲೂಕಿನ ಬೆಳಗುಂಬ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.
ಬೆಳಗುಂಬ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯನ್ನು ಆಕೆಯ ಪರಿಚಿತ ಶರತ್, ಹತ್ಯೆ ನಡೆಸಿದ ನಂತರ ಬಂಡಿಹಳ್ಳಿ ಸಮೀಪ ಚಲಿಸುವ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಗ್ರಾಮದ ವಿದ್ಯಾರ್ಥಿನಿ ಶಾಲೆ ಮುಗಿಸಿ ಸಂಜೆ ಐದು ಗಂಟೆ ಸುಮಾರಿನಲ್ಲಿ ಸೈಕಲ್ ನಲ್ಲಿ ಮನೆಗೆ ಹೋಗುವಾಗ ಹಿಂಬಾಲಿಸಿ ಬಂದು ಅಡ್ಡಗಟ್ಟಿದ ಶರತ್ ಚಾಕುವಿನಿಂದ ಬಾಲಕಿಯ ಕುತ್ತಿಗೆ ಸೀಳಿ ಹತ್ಯೆ ಮಾಡಿದ್ದಾನೆ.
ನಂತರ ಅಲ್ಲಿಂದ ಪರಾರಿಯಾದ ಆತ ಚಲಿಸುವ ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಅರಸೀಕೆರೆ ಗ್ರಾಮಾಂತರ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ರೈಲ್ವೆ ಪೊಲೀಸರು ಯುವಕನ ಶವ ವಶಕ್ಕೆ ಪಡೆದಿದ್ದಾರೆ.