ಹೆಲ್ಮೆಟ್ ಹಾಕದೆ ಟ್ರ್ಯಾಕ್ಟರ್ ಚಲಾಯಿಸಿದ ಕೆಪಿಸಿಸಿ ಸದಸ್ಯ: ಬಿತ್ತು ನೋಡಿ ಐನೂರು ರೂಪಾಯಿ ದಂಡ!

ಹಾಸನ: ಸರಿಯಾಗಿ 10-20 ಕಿಲೋ ಮೀಟರ್ ದೂರ ಕೂಡ ಆರಾಮವಾಗಿ ಕ್ರಮಿಸಲು ಸಾಧ್ಯವಾಗದ ಟ್ರ್ಯಾಕ್ಟರನ್ನು ನೂರಾರು ಕಿಲೋಮೀಟರ್ ದೂರದ ಮೈಸೂರು ಜಿಲ್ಲೆಯ ಊಟಿ ರಸ್ತೆಯಲ್ಲಿ ಹೆಲ್ಮೆಟ್ ಹಾಕದೆ ಚಾಲನೆ ಮಾಡಿದ ಅಪರಾಧಕ್ಕಾಗಿ ಕೆಪಿಸಿಸಿ ಸದಸ್ಯ ಎಡೆಹಳ್ಳಿ ಆರ್ ಮಂಜುನಾಥ್ ಅವರಿಗೆ 500 ದಂಡ ಪಾವತಿಸುವಂತೆ ಪೊಲೀಸ್ ಇಲಾಖೆ ನೋಟಿಸ್ ನೀಡಿದೆ!

ಹೌದು!, ಇದು ಪೊಲೀಸ್ ಇಲಾಖೆ ಮಾಡಿರುವ ಯಡವಟ್ಟು. ಮೇ 8 ರಂದು ಸಂಜೆ 4ಗಂಟೆಯಲ್ಲಿ ಯಲಚಾಗರೆಬಾರೆಯ ವೃತ್ತದಲ್ಲಿ ಊಟಿ ಕಡೆಗೆ KA18T1006 ನೋಂದಣಿ ಸಂಖ್ಯೆಯ ವಾಹನವನ್ನು ಹೆಲ್ಮೆಟ್ ಧರಿಸದೆ ಚಾಲನೆ ಮಾಡಿದ್ದಕ್ಕಾಗಿ 500ರೂ. ದಂಡ ಪಾವತಿಸಿ ಕಾನೂನು ಕ್ರಮದಿಂದ ಪಾರಾಗಿ ಎಂದು ಇ ಪಾವತಿ ಚಲನ್ ಲಿಂಕ್ SMS ಮೂಲಕ ಆರ್.‌ಮಂಜುನಾಥ್ ಅವರ ಮೊಬೈಲ್ ಗೆ ಬಂದಿದೆ.

ಇದನ್ನು ಕಂಡು ಯಡೇಹಳ್ಳಿ ಆರ್. ಮಂಜುನಾಥ್ ಅಚ್ಚರಿಗೊಳಗಾಗಿದ್ದಾರೆ. ನೋಟಿಸ್ ನಲ್ಲಿ ನಮೂದಾಗಿರುವ ವಾಹನ ಸಂಖ್ಯೆ ಸರಿಯಾಗಿಯೇ ಇದೆ. ಆದರೆ ಅದು ಕಾಫಿ ಬೆಳೆಗಾರರಾಗಿರುವ ಅವರು ತೋಟದ ಕೆಲಸಕ್ಕೆ ಬಳಸುವ ಟ್ರ್ಯಾಕ್ಟರ್ ಊಟಿ ಕಡೆಗೆ ಹೋಗಿದ್ದು ಹೇಗೆ? ಮತ್ತು ಟ್ರ್ಯಾಕ್ಟರ್ ಓಡಿಸಲು ಹೆಲ್ಮೆಟ್ ಏಕೆ ಹಾಕಬೇಕು ಎನ್ನುವುದು ಗೊತ್ತಾಗದೆ ಗೊಂದಲಕ್ಕೀಡಾಗಿದ್ದಾರೆ.

ಈ ಬಗ್ಗೆ ವಿವರಣೆ ಕೋರಿ ಪೊಲೀಸ್ ಇಲಾಖೆಯೆ ಇ ಮೇಲ್ ಕಳುಹಿಸುವುದಾಗಿ ತಿಳಿಸಿದ್ದಾರೆ. ಈಗ ವಾಹನ ಸಂಖ್ಯೆ ನಮೂದು ಮಾಡಿದರೆ ಅದು ಯಾವ ವಾಹನ ಎನ್ನುವ ಮಾಹಿತಿ ಮೊಬೈಲ್ ಆ್ಯಪ್ ನಲ್ಲಿಯೇ ದೊರೆಯುತ್ತದೆ. ಪೊಲೀಸರು ನೋಟಿಸ್ ಜಾರಿ ಮಾಡುವ ಮುನ್ನ ಅದನ್ನಾದರೂ ಗಮನಿಸದಿರುವುದು ಡಿಜಿಟಲ್ ಆಡಳಿತ ವ್ಯವಸ್ಥೆ ಬಗ್ಗೆಯೇ ಅನುಮಾನ ಮೂಡುವಂತೆ ಮಾಡುತ್ತದೆ.

ಪೊಲೀಸ್ ಇಲಾಖೆ ಕಳಿಸಿರುವ ಮೆಸೇಜ್ ಪಠ್ಯ:

Dear R MANJUNATH This is Notice U/s 133 IMV ACT against reg no: KA18T1006 for the traffic violation Not wearing Helmet on 2025-05-08 16:01:10.831 at Yalchagerebare Circle Towords Otty pls pay the fine Rs500 to avoid legal action. Pay online via: https://echallan.ksp.gov.in From Karnataka State Police