ಹಾಸನ : ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಭೈರವೈಕ್ಯ ಡಾ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ಹಿಮಾಲಯ ಸದೃಶ್ಯ ಶಕ್ತಿಯಾಗಿದ್ದರು. ಅವರನ್ನು ಮೊದಲ ದಿನ ಸ್ಪರ್ಶಿಸಿದ, ದರ್ಶಿಸಿದ ಭಾವ ಹೇಗಿತ್ತೋ ಜೀವಿತದ ಕೊನೆಯ ವೇಳೆಗೆ ಆ ಭಾವನೆ ನೂರ್ಮಡಿಯಾಗಿತ್ತೆಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಬಣ್ಣಿಸಿದರು.
ನಗರದ ಎಂ.ಜಿ.ರಸ್ತೆಯಲ್ಲಿರುವ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಗುರುವಾರ ಹಮಿಕೊಂಡಿದ್ದ ಭೈರವೈಕ್ಯ ಡಾ.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಪಟ್ಟಾಭಿಷೇಕ ಸುವರ್ಣ ಸಂಪೂರ್ತಿ ಮಹೋತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಬಾಲಗಂಗಾಧರನಾಥ ಸ್ವಾಮೀಜಿ ಅವರು ಯಾವತ್ತೂ ಸಹ ತಾವೊಬ್ಬ ದಾರ್ಶನಿಕ ಎಂದು ಹೇಳಿಕೊಳ್ಳಲಿಲ್ಲ. ಸಾಮಾನ್ಯರಲ್ಲಿ ಅತಿ ಸಾಮಾನ್ಯರಾಗಿ ಬದುಕಿದರು. ಅವರ ಜೀವನ, ಆಚಾರ ವಿಚಾರಗಳು ಎಂದೆಂದಿಗೂ ಪ್ರಸ್ತುತ. ಮನುಷ್ಯನ ದೇಹ ಮಾತ್ರವಲ್ಲದೆ ಮನಸ್ಸು ಶುದ್ಧಿಯಾಗಬೇಕೆಂದು ಶ್ರೀಗಳು ಪ್ರತಿಪಾದಿಸುತ್ತಿದ್ದರು.
ಪ್ರಗತಿ, ವಿಕಾಸ, ಪರಿವರ್ತನೆ ಇದ್ದಲ್ಲಿ ಸತ್ಯ ಬದಲಾವಣೆಯಾಗುತ್ತದೆ. ಅದನ್ನೆಲ್ಲ ಅನುಭವಿಸಲು ಅಂತರಂಗದ ಕಣ್ಣು ಶುದ್ಧವಾಗಿರಬೇಕು. ತಾಮಸ ಗುಣಗಳಿದ್ದ ಮನುಷ್ಯನ ಬಳಿಗೆ ಭಗವಂತ ಬಂದರೂ ಕಾಣಿಸುವುದಿಲ್ಲ. ದೇಹ ಶುದ್ಧಿಯಂತೆ ಮನಸ್ಸಿನ ಶುದ್ಧಿಯೂ ಆಗಬೇಕು. ಜೀವನ ಸಾರ್ಥಕವಾಗಬೇಕೆಂದರೆ ಗುರು ಸ್ಮರಣೆ ಮಾಡಬೇಕು. ಆದರೆ ಪ್ರಸ್ತುತ ದಿನಗಳಲ್ಲಿ ಮನುಷ್ಯ ಯಂತ್ರಗಳ ಮಾತು ಕೇಳಿ ಬದುಕುತ್ತಿದ್ದಾನೆಂದರು.
ಯೇಸು ಕ್ರಿಸ್ತ, ಬುದ್ದನನ್ನು ಓದಿಕೊಂಡ ಮೇಲೆ ನಮಲ್ಲಿ ಸ್ವಾಮೀಜಿಗಳೆಲ್ಲ ಯಾಕೆ ಎಂಬ ಭಾವನೆ ಬೇರೂರಿತ್ತು. ಆದರೆ ಒಂದು ಬಾರಿ ಬಾಲಗಂಗಾಧರನಾಥ ಸ್ವಾಮೀಜಿ ಅವರನ್ನು ಹತ್ತಿರದಿಂದ ಕಂಡ ಬಳಿಕ ವಿಚಾರಧಾರೆಯೂ ಬದಲಾಯಿತು. ಚಂದ್ರ ದೂರದಿಂದ ನೋಡಲು ಮಾತ್ರ ಸುಂದರವಾಗಿ ಕಾಣುತ್ತಾನೆ. ಹತ್ತಿರ ಹೋದಂತೆ ಅಲ್ಲಿಯೂ ಕಲ್ಲು, ಮಣ್ಣು, ಧೂಳು ಕಾಣಿಸುತ್ತದೆ. ಅದೇ ರೀತಿ ದೂರದಿಂದ ನೋಡುವುದೆಲ್ಲ ಚೆಂದವೆನಿಸಿದರೂ ಸಮೀಪಿಸಿದಾಗ ಅದರ ನಿಜಮರ್ಮ ತಿಳಿಯುತ್ತದೆ. ಆದರೆ ಬಾಲಗಂಗಾಧರನಾಥ ಸ್ವಾಮೀಜಿ ದೂರದಿಂದ ಎಷ್ಟು ಪರಿಶುದ್ಧವಾಗಿದ್ದರೋ ಹತ್ತಿರದಿಂದಲೂ ಅಷ್ಟೇ ಘನತೆಯುಳ್ಳವರಾಗಿದ್ದರು. ಆದ್ದರಿಂದ ನಮಗೆ ಅವರ ಮೇಲಿನ ಪ್ರೀತಿ ನೂರ್ಮಡಿಯಾಯಿತು ಎಂದು ತಿಳಿಸಿದರು.
ಬೆಂಗಳೂರಿನ ಬೇಲಿಮಠದ ಶ್ರೀ ಶಿವರುದ್ರ ಸ್ವಾಮೀಜಿ ಅವರು ಮಾತನಾಡಿ, ಬಾಲಗಂಗಾಧರನಾಥ ಸ್ವಾಮೀಜಿ ಅವರು ಬರುವ ಮುಂಚೆ ಇಡೀ ನಾಥ ಪರಂಪರೆ ಮೇಲೆ ಕಾರ್ಮೋಡ ಕವಿದಿತ್ತು. ಸಮಾಜ ಯಾವ ಕ್ಷೇತ್ರದಲ್ಲೂ ಪ್ರಗತಿ ಸಾಧಿಸಿರಲಿಲ್ಲ. ಆಗ ಶ್ರೀಗಳು ತಮದೇಯಾದ ಯೋಚನೆಗಳ ಮೂಲಕ ಸಮಾಜವನ್ನು ಕಟ್ಟಿ ಬೆಳೆಸಿದರೆಂದರು.
ಶಿಥಿಲಾವಸ್ಥೆ ತಲುಪಿದ್ದ ಉಜ್ಜಯಿನಿ ಕಾಲಭೈರವೇಶ್ವರ ದೇವಾಲಯಕ್ಕೆ 1969ರಲ್ಲಿ ಮರು ಜನ ನೀಡಿದರು. ಕಾಶಿ ದೇವಾಲಯ ಸಮೀಪದಲ್ಲಿದ್ದ ಕಾಲ ಭೈರವೇಶ್ವರನ ಸನ್ನಿಧಿಯನ್ನು ಕಂಡು ಅಲ್ಲಿಯೂ ಅಭಿವೃದ್ಧಿಗೆ ಆದ್ಯತೆ ನೀಡಿದರು.
ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದ ಸಾಂಸ್ಕೃತಿಕ, ಜನಪದ ಕಲೆ ಉಳಿಯಬೇಕೆಂಬ ಉದ್ದೇಶದಿಂದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ಪ್ರತಿವರ್ಷ ಪಟ್ಟಾಭಿಷೇಕ ಮಹೋತ್ಸವ ನಡೆಸುತ್ತಿದ್ದರು. ದೇಶದ ವಿವಿಧ ಭಾಗದ ಕಲಾವಿದರಿಗೆ ಸುಮಾರು 40 ರಿಂದ 50 ಲಕ್ಷ ರೂ. ಪ್ರಯಾಣ ವೆಚ್ಚ ಭರಿಸಿ ಸಂಸ್ಕೃತಿಯ ಉಳಿವಿಗೆ ಶ್ರಮಿಸಿದ್ದರು. ಈಗ ಪ್ರಯಾಣ ವೆಚ್ಚ 1.80 ಕೋಟಿ ರೂ.ಗೆ ಏರಿಕೆಯಾಗಿದ್ದು ಪ್ರಸ್ತುತ ಮಠಾಧೀಶರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆಯೆಂದರು.
2 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ನಾಥ ಪರಂಪರೆಗೆ ತನ್ನದೇಯಾದ ಮಹತ್ವವಿದೆ. ಜಾತ್ಯಾತೀತವಾಗಿ ಶ್ರೀಮಠವನ್ನು ಪ್ರೀತಿಸುವ ಭಕ್ತರಿದ್ದಾರೆ. ಶ್ರೀ ಮಠದ 71ನೇ ಪೀಠಾಧ್ಯಕ್ಷರಾಗಿದ್ದ ಬಾಲಗಂಗಾಧರನಾಥ ಸ್ವಾಮೀಜಿ ಅವರಿಂದ ಕ್ರಾಂತಿಕಾರಕ ಬದಲಾವಣೆಗಳಾಗಿವೆ ಎಂದರು.
ಶಾಸಕ ಹೆಚ್.ಪಿ.ಸ್ವರೂಪ್ ಅವರು ಮಾತನಾಡಿ, ಡಾ.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಪಟ್ಟಾಭಿಷೇಕ ಮಹೋತ್ಸವ ಅಂಗವಾಗಿ ಹಾಸನದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು ಸಂತಸ ತಂದಿದೆ. ಸಮಾಜದ ಬೆಳವಣಿಗೆಯಲ್ಲಿ ಆದಿಚುಂಚನಗಿರಿ ಮಠದ ಪಾತ್ರ ಅಧಿಕವಾಗಿದೆಯೆಂದರು.
ಇದೇ ವೇಳೆ ರಜತ ತುಲಭಾರ ನೆರವೇರಿತು. ಹಾಸನ ಶಾಖಾ ಮಠದ ವಟುಗಳು ವೇದಘೋಷ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಪುರುಷೋತ್ತಮಾನಂದ ಸ್ವಾಮೀಜಿ, ಶಿವಾನಂದಪುರಿ ಶ್ರೀ, ಮೈಸೂರಿನ ಸೋಮೇಶ್ವರನಾಥ ಸ್ವಾಮೀಜಿ, ಡಾ.ಧರ್ಮಪಾಲನಾಥ ಸ್ವಾಮೀಜಿ, ಗುಣನಾಥ ಸ್ವಾಮೀಜಿ, ಶ್ರೀ ಶಂಕರಾರೂಢರು, ಶಿವಪುತ್ರನಾಥ ಸ್ವಾಮೀಜಿ, ಕೈಲಾಸನಂದನಾಥ ಸ್ವಾಮೀಜಿ, ಶ್ರೀ ರಮಾನಂದ ಸ್ವಾಮೀಜಿ, ಸಂಸದ ಶ್ರೇಯಸ್ ಪಟೇಲ್, ತಮಿಳುನಾಡಿನ ಕಂಬಂ ಕ್ಷೇತ್ರ ಶಾಸಕ ರಾಮಕೃಷ್ಣನ್, ಮಾಜಿ ಶಾಸಕ ಎ.ಟಿ.ರಾಮಸ್ವಾಮಿ, ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಜಿ.ಎಲ್.ಮುದ್ದೇಗೌಡ, ಆಲೂರು ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಹೆಚ್.ಪಿ.ಮೋಹನ್, ಸುಮುಖ ರಘು, ಚಂದ್ರೇಗೌಡ, ದೇವರಾಜು, ರಾಮಚಂದ್ರ ಮೇತ್ರಿ ಹಾಗು ಇತರರಿದ್ದರು.