ಬೆಟ್ಟಿಂಗ್ ಕಟ್ಟಬೇಡಿ, ಭಗವಂತ ಇದ್ದಾನೆ ಫೋನ್ ಸ್ವಿಚ್ಛಾಫ್ ಮಾಡಿ ಆರಾಮವಾಗಿ ಮಲಗಿ ಎಂದ ನಿಖಿಲ್ ಕುಮಾರಸ್ವಾಮಿ

ಹಾಸನ: ಯುವಕರು ಮೊಬೈಲ್ ಸ್ವಿಚ್ ಆಫ್ ಮಾಡಿ ಆರಾಮವಾಗಿರಿ ಎಂದು ಚನ್ನಪಟ್ಟಣ ಕ್ಷೇತ್ರದ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯ ದೇವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,

ನನ್ನ ಚುನಾವಣೆಗಾಗಿ ಬಹಳ ಜನ ದುಡಿದಿದ್ದಾರೆ. ಮಾಜಿ ಸಚಿವರು, ಶಾಸಕರು ಚುನಾವಣೆ ಮಾಡಿದ್ದಾರೆ.

ಜೆಡಿಎಸ್ ಪಕ್ಷದ ಇತಿಹಾಸದಲ್ಲಿ ಇಂತಹ ಚುನಾವಣೆ ನಡೆದಿರಲಿಲ್ಲ. ಇದು ಇತಿಹಾಸದ ಪುಟಗಳಲ್ಲಿ ಉಳಿಯುವ ಚುನಾವಣೆ. ನಮಗೆ ಅವಕಾಶ ಸಿಕ್ಕಿದೆ, ಟಿಕೆಟ್ ಕೊಟ್ಟಿರುವುದು ನನ್ನ ಸೌಭಾಗ್ಯ ಎಂದರು.

 

ಯುವಕರು, ಹಿರಿಯರು ಉತ್ಸಾಹದಿಂದ ನನ್ನ ಜೊತೆ ಹೆಜ್ಜೆ ಹಾಕಿದ್ದಾರೆ. ನನ್ನ ಹೃದಯದಲ್ಲಿ ಸಂಪೂರ್ಣ ಗೆಲುವಿನ ವಿಶ್ವಾಸವಿದೆ. ದೇವೇಗೌಡರು, ಕುಮಾರಣ್ಣ 1200 ಕೋಟಿ ಅನುದಾನ ತಂದು ಚನ್ನಪಟ್ಟಣ ಅಭಿವೃದ್ಧಿ ಮಾಡಿದ್ದಾರೆ. ಜನರು ಆಶೀರ್ವಾದ ಮಾಡಿದರೆ ಮುಂದಿನ ದಿನಗಳಲ್ಲಿ ಯುವ ಸಮುದಾಯಕ್ಕೆ ಆದ್ಯತೆ ಕೊಡುತ್ತೇನೆ. ಉದ್ಯೋಗ ಸೃಷ್ಠಿ ಮಾಡಲು ದೃಡ ಸಂಕಲ್ಪ ಮಾಡಿದ್ದೇನೆ ಎಂದರು.

 

ಫಲಿತಾಂಶ ವಿಚಾರವಾಗಿ ಯಾರೂ ಬೆಟ್ಟಿಂಗ್ ಕಟ್ಟಬೇಡಿ. ಫೋನ್ ಸ್ವಿಚ್ ಆಫ್ ಮಾಡಿ ಮಲಗಿಬಿಡಿ. ಬೆಟ್ಟಿಂಗ್ ಕಟ್ಟಿ ಆರ್ಥಿಕ ನಷ್ಟ ಅನುಭವಿಸಬೇಡಿ. ಮಾಧ್ಯಮದ ಮೂಲಕ ಮನವಿ ಮಾಡುತ್ತೇನೆ. ಆ ಭಗವಂತ ಇದ್ದಾನೆ. ಆರಾಮವಾಗಿ ಫೋನ್ ಸ್ಬಿಚ್ ಆಫ್ ಮಾಡಿ ಮಲಗಿ ಎಂದು ಸಲಹೆ ನೀಡಿದರು.

ಬೆಟ್ಟಿಂಗ್‌ನಿಂದಾಗಿ ಯುವಕರು ಆತ್ಮಹತ್ಯೆಗೆ ಶರಣನಾಗುತ್ತಿದ್ದಾರೆ. ಚುನಾವಣೆ ಫಲಿತಾಂಶದ ಬಗ್ಗೆ ಬೆಟ್ಟಿಂಗ್ ಕಟ್ಟಬೇಡಿ. ಹಲವೆಡೆ ಎನ್‌ಡಿಎ ಅಭ್ಯರ್ಥಿ ಗೆಲ್ಲಲಿ ಎಂದು ಪ್ರಾರ್ಥನೆ ಮಾಡಿದ್ದಾರೆ. ಜನರ, ದೇವರ ಆಶೀರ್ವಾದದಿಂದ ಗೆಲ್ಲುವ ವಿಶ್ವಾಸವಿದೆ ಎಂದರು