ಸರ್ಕಾರಿ ಶಾಲೆಯಲ್ಲಿ ಎರಡು ರಾತ್ರಿಗಳ ವಾಮಾಚಾರ!: ಮಕ್ಕಳು, ಪೋಷಕರಲ್ಲಿ ಆತಂಕ

ಹಾಸನ, ಜನವರಿ 17: ಅರಸೀಕೆರೆ ತಾಲ್ಲೂಕಿನ ಮುದುಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ವಾಮಾಚಾರ ನಡೆಯುತ್ತಿರುವ ಸುದ್ದಿ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕವನ್ನು ಉಂಟುಮಾಡಿದೆ.

ಕಳೆದ ಎರಡು ದಿನಗಳಿಂದ ಶಾಲೆಯ ಒಂಭತ್ತನೇ ತರಗತಿ ಕೊಠಡಿ ಎದುರು ಮತ್ತು ಆವರಣದಲ್ಲಿ ಕಿಡಿಗೇಡಿಗಳು ಮಾಟ-ಮಂತ್ರವನ್ನು ನಡೆಸಿದ್ದಾರೆ ಎನ್ನಲಾಗಿದೆ.

ಶಾಲಾ ಕೊಠಡಿಯ ಬಾಗಿಲಿಗೆ ಹಸಿ ನೂಲು ಕಟ್ಟಲಾಗಿದ್ದು, ಅರಿಶಿನ, ಕುಂಕುಮ, ಬಾಳೆಹಣ್ಣು, ತೆಂಗಿನಕಾಯಿ ಮುಂತಾದ ಪೂಜಾ ಸಾಮಾಗ್ರಿಗಳನ್ನು ಇಡಲಾಗಿದೆ. ಬುಧವಾರ ರಾತ್ರಿ ಶಾಲೆಯ ಆವರಣದಲ್ಲಿ ತೆಂಗಿನಗರಿ ಚಪ್ಪರ ಹಾಕಿ ಗೊಂಬೆ ಮುರಿದು, ವಾಮಾಚಾರ ನಡೆಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ಶಾಲೆ ಆವರಣದಲ್ಲಿ ವಾಮಾಚಾರಕ್ಕಾಗಿ ನಿರ್ಮಿಸಿರುವ ಚಪ್ಪರ

ಮಕ್ಕಳಲ್ಲಿ ಆತಂಕ:
ಶಾಲೆಯು ಸುಮಾರು 70 ವಿದ್ಯಾರ್ಥಿಗಳನ್ನು ಹೊಂದಿದ್ದು, ಈ ಘಟನೆಯಿಂದ ಮಕ್ಕಳು ಹಾಗೂ ಪೋಷಕು ಭಯಭೀತರಾಗಿದ್ದಾರೆ. ವಾಮಾಚಾರದ ದೃಶ್ಯಗಳನ್ನು ಕಂಡು ಮಕ್ಕಳು ಹೆಚ್ಚಿನ ಚಿಂತೆಯಲ್ಲಿದ್ದಾರೆ ಎನ್ನುತ್ತಾರೆ ಶಿಕ್ಷಕರು.

ಪೊಲೀಸ್ ದೂರು:
ಶಾಲೆಯ ಮುಖ್ಯೋಪಾಧ್ಯಾಯರು ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ಮುಂದಾಗಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.