ಕೆರೆಗೆ ಬಿತ್ತು ಚರ್ಚ್ ನಿಂದ ಮರಳುತ್ತಿದ್ದ ಮೂವರು ಪ್ರಯಾಣಿಸುತ್ತಿದ್ದ ಕಾರು

ಹಾಸನ; ಚಾಲಕನ ನಿಯಂತ್ರಣ ತಪ್ಪಿ ಕಾರು ಕೆರೆಗೆ ಉರುಳಿದ್ದು, ಕಾರಿನಲ್ಲಿದ್ದ ಚರ್ಚ್‌ನ ಫಾದರ್ ಸೇರಿ ಮೂವರು ತೋರಿದ ಸಮಯಪ್ರಜ್ಞೆಯಿಂದ ಪ್ರಾಣಾಪಾಯದಿಂದ ಪಾರಾದ ಘಟನೆ ಆಲೂರು ತಾಲ್ಲೂಕಿನ, ಮಠದಕೊಪ್ಪಲು ಗ್ರಾಮದ ಬಳಿ ನಡೆದಿದೆ.

ಜಯಪ್ರಕಾಶ್ ಸ್ಟಾನಿ, ಕಾರಿನ ಮಾಲೀಕ ಸಬ್ಬಾಸ್ ರಾಯಪ್ಪ ಪ್ರಾಣಾಪಾಯದಿಂದ ಪಾರಾದವರು.

ಮಠದಕೊಪ್ಪಲಿನಲ್ಲಿರುವ ಫ್ರಾನ್ಸಿಸ್ ಚರ್ಚ್‌ನಲ್ಲಿ ಸಂಜೆ ಪ್ರಾರ್ಥನೆ ಮುಗಿಸಿಕೊಂಡು ಮೂವರೂ ಮಗ್ಗೆಗೆ ಕಾರಿನಲ್ಲಿ ತೆರಳುತ್ತಿದ್ದರು. ಆಗ ಎದುರಿನಿಂದ ಬಂದ ವಾಹನಕ್ಕೆ ದಾರಿ ಬಿಡಲು ಚಾಲಕ ಕಾರನ್ನು ಎಡಕ್ಕೆ ತಿರುಗಿಸಿದಾಗ ನಿಯಂತ್ರಣ ತಪ್ಪಿ ಮಠದಕೊಪ್ಪಲು ಗ್ರಾಮದ ಕೆರೆ ಏರಿಯ ಮೇಲಿಂದ ಕೆರೆಯ ನೀರಿಗೆ ಬಿದ್ದಿದೆ.

 

ತಕ್ಷಣ ಮೂವರೂ ಕಾರಿನ ಕಿಟಕಿಯಿಂದ ಹೊರ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಕಿರಿದಾದ ರಸ್ತೆಯಿಂದಾಗಿ ಅಪಘಾತ ನಡೆದಿದೆ. ಕಳೆದ ಜುಲೈ ತಿಂಗಳಿನಲ್ಲಿ ಇದೇ ಕೆರೆಗೆ ಕಾರು ಬಿದ್ದು ಅವಘಡ ಸಂಭವಿಸಿತ್ತು. ತಡೆಗೋಡೆ ನಿರ್ಮಿಸುವಂತೆ ಗ್ರಾಮಸ್ಥರು ಹಾಗೂ ವಾಹನ ಸವಾರರು ಆಗ್ರಹಿಸಿದ್ದಾರೆ.