ಕಾಂಗ್ರೆಸ್ ಅಭ್ಯರ್ಥಿ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ, ನಾನಲ್ಲ, ದೇವೇಗೌಡರೇ ಅಭ್ಯರ್ಥಿ ಎಂದುಕೊಂಡು ಮತಹಾಕಿ; ಪ್ರಜ್ವಲ್ ರೇವಣ್ಣ ಮನವಿ

ಐದು ವರ್ಷದಲ್ಲಿ ನಾನು ಸಣ್ಣಪುಟ್ಟ ತಪ್ಪು ಮಾಡಿದ್ದರೆ ಕ್ಷಮಿಸಿ

ಹಾಸನ : ತಾಲ್ಲೂಕಿನ ಮೊಸಳೆಹೊಸಳ್ಳಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಜೆಡಿಎಸ್ ಪ್ರಚಾರ ಸಭೆಯಲ್ಲಿ ಎನ್.ಡಿ.ಎ. ಮೈತ್ರಿ ಅಭ್ಯರ್ಥಿ, ಸಂಸದ ಪ್ರಜ್ವಲ್‌ರೇವಣ್ಣ ಕಾಂಗ್ರೆಸ್ ಸರ್ಕಾರ ಹಾಗೂ ಅಭ್ಯರ್ಥಿ ವಿರುದ್ದ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಒಂಭತ್ತು ತಿಂಗಳು ಕಳೆದಿದೆ. ಎಲ್ಲಾ ಕಡೆ ಹೋಗಿ ಪುಟ್ಟ ಪುಟ್ಟ ಸಭೆ ಮಾಡುತ್ತಿದ್ದಾರೆ. ಪ್ರಜ್ವಲ್‌ರೇವಣ್ಣ ಏನು ಕೆಲಸ ಮಾಡಿದ್ದಾರೆ ಎಂದು ನನ್ನ ವಿರುದ್ಧ ಜನರನ್ನು ಎತ್ತಿಕಟ್ಟುತ್ತಿದ್ದಾರೆ ಎಂದು ಆರೋಪಿಸಿದರು.

ಹಿನ್ನೆಲೆ ಗೊತ್ತಿದ್ದರೆ ಮುನ್ನೆಲೆ ಬರೆಯಬಹುದು. ದೇವೇಗೌಡರು, ಮೋದಿಯವರ ಆಶೀರ್ವಾದದಿಂದ ಸಾವಿರಾರು ಕೋಟಿ ಅನುದಾನ ತಂದಿದ್ದೇನೆ. ಇವತ್ತು ಬಹಳಷ್ಟು ತಪ್ಪು ಸಂದೇಶ ಕಳುಹಿಸುತ್ತಿದ್ದಾರೆ. ಚುನಾವಣೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಜನರ ಕಣ್ಣೀರು ಒರೆಸುವುದು ಬಹಳ ಮುಖ್ಯ.

ಈಗಿನ ಕಾಂಗ್ರೆಸ್ ಅಭ್ಯರ್ಥಿ ಎಷ್ಟು ಜನರ ಬಳಿ ಬಂದು ಮಾತನಾಡಿಸಿದ್ದಾರೆ?ಯಾರದ್ದಾದರೂ ಕಣ್ಣೀರು ಒರೆಸಿದ್ದಾರಾ? ಅವರದ್ದೇ ಸರ್ಕಾರ ಇದೆಯಲ್ಲಾ ಒಮ್ಮೆಯಾದರೂ ನಿಮ್ಮ ಬಳಿ ಬಂದು ಕಷ್ಟ ಕೇಳಿದ್ದಾರೆಯೇ ಎಂದು ಪ್ರಶ್ನಿಸಿದರು.

ಹಾಸನ ಜಿಲ್ಲೆಗೆ ಕಾಂಗ್ರೆಸ್ ಅಭ್ಯರ್ಥಿಯ ಕೊಡುಗೆ ಏನು? ಅಂತಹವರಿಗೆ ಏಕೆ ಮತ ಹಾಕಬೇಕು? ಕೊರೊನಾ ಸಂದರ್ಭದಲ್ಲಿ ಜನರು ನರಳುತ್ತಿದ್ದಾಗ ಇವರು ಐದು ವರ್ಷ ಎಲ್ಲಿದ್ದರು? ಕೊರೊನಾ ವೇಳೆ ನಾವು ನಮ್ಮ‌ ಕೈಲಾದ ಸಹಾಯ ಮಾಡಿದ್ದೇವೆ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಮೊಸಳೆ ಕಣ್ಣೀರು ಹಾಕಿಕೊಂಡು ಸುಳ್ಳು ಹೇಳಿ ಅಪಪ್ರಚಾರ ಮಾಡುತ್ತಿದ್ದಾರೆ ಗೆಯ್ಯುವ ಎತ್ತಿಗೆ ಹುಲ್ಲು ಹಾಕಬೇಕಲ್ಲವಾ? ನಾನು ಅಭ್ಯರ್ಥಿಯಲ್ಲ ದೇವೇಗೌಡರು ಅಭ್ಯರ್ಥಿ ಎಂದು ಮತ ಹಾಕಿ ಎಂದು ಮನವಿ ಮಾಡಿದರು.

ರೈತರ ಬಗ್ಗೆ ಈ ಸರ್ಕಾರಕ್ಕೆ ಕಾಳಜಿ ಇಲ್ಲ
ಹೇಮಾವತಿ ನದಿಯ ನೀರನ್ನು ರಾತ್ರೋ ರಾತ್ರಿ ತಮಿಳುನಾಡಿಗೆ ಹರಿಸಿದರು. ಪಕ್ಕದ ರಾಜ್ಯದವರ ಮೇಲೆ ನಿಮಗೆ ಏಕೆ ಇಷ್ಟು ಕಾಳಜಿ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲಾ ಬರಗಾಲ ಬರುತ್ತೆ. ಬಂಗಾರಪ್ಪ ಅವರ ಅವಧಿ ಬಿಟ್ಟರೆ ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲಾ ಬರಗಾಲ ಬಂದಿದೆ ಎಂದು ವ್ಯಂಗ್ಯವಾಡಿದರು.

ನುಡಿದಂತೆ ನಡೆದ ಯಾರಾದರೂ ಮುಖ್ಯಮಂತ್ರಿ ಇದ್ದರೆ ಅದು ಕುಮಾರಣ್ಣ ಮಾತ್ರ, ಅವರು ರೈತರ ಸಾಲಮನ್ನಾ ಮಾಡಿ ನುಡಿದಂತೆ ನಡೆದರು. ಕಾಂಗ್ರೆಸ್ ಪಕ್ಷ ರೈತರನ್ನು ಸಂಕಷ್ಟಕ್ಕೆ ತಳ್ಳುತ್ತಿದೆ. ಇನ್ನೊಂದೇ ತಿಂಗಳಲ್ಲಿ ಬೇಸಿಗೆ ಜನರನ್ನು ಎಲ್ಲಿಗೆ ಕೊಂಡೊಯ್ಯುತ್ತೋ ಗೊತ್ತಿಲ್ಲ. ಅಂತರ್ಜಲ ಬತ್ತಿ ಹೋಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕಾಂಗ್ರೆಸ್ಸಿನವರು ಗ್ಯಾರೆಂಟಿ ಬಿಟ್ಟರೆ ರೈತರಿಗೆ ಅನುಕೂಲವಾಗುವ ಯಾವ ಕೆಲಸ ಕೊಟ್ಟಿದ್ದಾರೆ? ಶ್ರೀಮಂತರು ಮಾತ್ರ ಶ್ರೀಮಂತರಾಗಬೇಕು. ರೈತರು, ಬಡವರು ಬಡವರಾಗಿಯೇ ಉಳಿಯಬೇಕು. ಸಿದ್ದರಾಮಯ್ಯ ಅವರೇ ರೈತರ ಕಂಡರೆ ಏಕೆ ನಿಮಗೆ ಇಷ್ಟೊಂದು ವಿರೋಧ, ಏಕೆ ರೈತರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಪ್ರಶ್ನಿಸಿದರು.

ಇಂತಹ ಸಂದರ್ಭದಲ್ಲಿ ಯಾವ ಮುಖ ಇಟ್ಟುಕೊಂಡು ಓಟು ಕೇಳ್ತಾರೆ? ಕೆಲಸ ಮಾಡಿದ್ರೆ ಮತ ಕೇಳಲು ಬರಬೇಕು, ಇಲ್ಲಾ ಮತ ಕೇಳಲು ಬರಬಾರದು. ಐದು ವರ್ಷದಲ್ಲಿ ನಾನು ಸಣ್ಣಪುಟ್ಟ ತಪ್ಪು ಮಾಡಿದ್ದರೆ ಕ್ಷಮಿಸಿ ಎಂದರು.