ಹಾಸನ: ರಸ್ರೆ ಬದಿಯಲ್ಲಿ ಆಟವಾಡುತ್ತಿದ್ದ ಆರು ವರ್ಷದ ಪುಟ್ಟ ಬಾಲಕಿಯ ಮೇಲೆ ದಾಳಿ ಮಾಡಿದ ಬೀದಿನಾಯಿಗಳು ಬಾಲಕಿಯ ತಲೆ ಬುರುಡೆ ಚರ್ಮವನ್ನೇ ಕಿತ್ತು ಹಾಕಿ ಪ್ರಾಣವನ್ನೇ ತೆಗೆದ ಭೀಕರ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಅಯ್ಯನಬಾವಿ ಭೋವಿ ಕಾಲೋನಿಯಲ್ಲಿ ಶನಿವಾರ ನಡೆದಿದೆ.
6 ವರ್ಷದ ಬಾಲಕಿ ನವ್ಯಾ, ಬೀದಿ ನಾಯಿಗಳ ದಾಳಿಗೆ ಒಳಗಾಗಿ ದಾರುಣವಾಗಿ ಸಾವನ್ನಪ್ಪಿದ ನತದೃಷ್ಟ ಬಾಲಕಿ. ನಾಯಿ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಆಕೆಯನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲೇ ಪ್ರಾಣಪಕ್ಷಿ ಹಾರಿಹೋಗಿದೆ.
ವಿಶೇಷಚೇತನರಾದ ತಂದೆ ಮಹಲಿಂಗಯ್ಯ (ಕಾಲು ಮುರಿತ ಹಾಗೂ ಕಿವಿಕೇಳದ ಸ್ಥಿತಿ) ಮತ್ತು ತಾಯಿ ಭಾಗ್ಯಮ್ಮ (ಕಿವಿಕೇಳದ ಸ್ಥಿತಿ) ಅವರ ಏಕೈಕ ಮಗಳಾದ ನವ್ಯಾ, ಬೀದಿಯಲ್ಲಿ ಆಟವಾಡುತ್ತಿದ್ದಾಗ ಏಕಾಏಕಿ ದಾಳಿ ಮಾಡಿದ ಬೀದಿ ನಾಯಿಗಳು ಬಾಲಕಿಯ ಮುಖ, ತಲೆ, ಹೊಟ್ಟೆ, ಕೈ, ಕಾಲುಗಳನ್ನು ತೀವ್ರವಾಗಿ ಕಚ್ಚಿ ಗಂಭೀರವಾಗಿ ಗಾಯಗೊಳಿಸಿವೆ.
ತಲೆಗೂದಲು ಸಮೇತ ಸಿಪ್ಪೆ ತೆಗೆದ ರೀತಿಯಲ್ಲಿ ತಲೆ ಬುರುಡೆ ಮೇಲಿನ ಚರ್ಮ ಕಿತ್ತು ಬಂದು ರಕ್ತದ ಮಡುವಿನಲ್ಲಿ ಬಿದ್ದಿದ್ದ ನವ್ಯಾಳನ್ನು ಸ್ಥಳೀಯರು ಶ್ವಾನಗಳಿಂದ ಬಿಡಿಸಿ ಹಾಸನದ ಆಸ್ಪತ್ರೆಗೆ ಕರೆತರುವ ಪ್ರಯತ್ನ ಮಾಡಿದರಾದರೂ, ಮಾರ್ಗಮಧ್ಯೆಯೇ ಅವಳು ಕೊನೆಯುಸಿರೆಳೆದಿದ್ದಾಳೆ.
ಈ ಘಟನೆಯಿಂದ ನವ್ಯಾಳ ಪೋಷಕರ ಆಕ್ರಂದನ ಮುಗಿಲುಮುಟ್ಟಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಬೀದಿ ನಾಯಿಗಳ ದಾಳಿಯಿಂದ ಉಂಟಾದ ಈ ದುರಂತ ಆಕ್ರೋಶದ ಜ್ವಾಲೆ ಹೊತ್ತಿಸಿದ್ದು ಜನರು ಸ್ಥಳೀಯ ಆಡಳಿತದ ವಿರುದ್ಧ ಕಿಡಿಕಾರಿದ್ದಾರೆ.