ಹಾಸನ: ನಗರದ ಎನ್.ಆರ್. ವೃತ್ತದಿಂದ ಹೊಸ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಮೇಲ್ಸೇತುವೆ ಸೋಮವಾರ ರಾತ್ರಿ ಸಾರ್ವಜನಿಕರ ಬಳಕೆಗೆ ಮುಕ್ತಗೊಂಡಿತು.
ಹಾಸನ ಉಪವಿಭಾಗಾಧಿಕಾರಿ ಮಾರುತಿ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಸಂಚಾರ ಪೊಲೀಸರ ಉಪಸ್ಥಿತಿಯಲ್ಲಿ ರಾತ್ರಿ ಎಂಟು ಗಂಟೆ ಸುಮಾರಿಗೆ ಎನ್.ಆರ್. ವೃತ್ತದ ಕಡೆ ಅಡ್ಡಲಾಗಿ ಇರಿಸಿದ್ದ ಬ್ಯಾರಿಕೇಡ್ ಗಳನ್ನು ತೆರವುಗೊಳಿಸಲಾಯಿತು. ನಂತರ ಜಿಲ್ಲಾ ನ್ಯಾಯಾಲಯ ಕಡೆಯ ಬ್ಯಾರಿಕೇಡ್ ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಸುತ್ತಿಬಳಸುವ ಹಾದಿಯಲ್ಲಿ ಐದು ವರ್ಷಗಳಿಂದ ಓಡಾಡಿ ಹೈರಾಣಾಗಿದ್ದ ಸಾರ್ವಜನಿಕರು ಮೇಲ್ಸೇತುವೆ ದ್ವಿಪಥ ಸಿದ್ಧಗೊಂಡರೂ ಸೇವೆಗೆ ತೆರೆದುಕೊಳ್ಳದಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.
ಕಡೆಗೂ ಸಾರ್ವಜನಿಕರ ಒತ್ತಾಯ, ಒತ್ತಡಕ್ಕೆ ಮಣಿದ ಜಿಲ್ಲಾಡಳಿತ ಮೇಲ್ಸೇತುವೆ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿದೆ.