ಹಾಸನ: ಎನ್.ಡಿ.ಎ. ಅಭ್ಯರ್ಥಿ ಚುನಾವಣಾ ಚಿಹ್ನೆ ಯಾವುದಿರುತ್ತದೆ ಎನ್ನುವ ಕಾಂಗ್ರೆಸ್ ನಾಯಕರ ವ್ಯಂಗ್ಯಕ್ಕೆ ಪ್ರತಿಯಾಗಿ ಸಂಸದ, ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ, ಜೆಡಿಎಸ್ ಪಕ್ಷದ ಚಿಹ್ನೆಯಾದ ತೆನೆಹೊತ್ತ ಮಹಿಳೆಗೆ ಕಮಲ ಎಂದು ನಾಮಕರಣ ಮಾಡಿದ್ದಾರೆ!
ಹೌದು, ಈ ವಿಷಯವನ್ನು ಸ್ವತಃ ಪ್ರಜ್ವಲ್ ರೇವಣ್ಣ ಅವರೇ ಚನ್ನರಾಯಪಟ್ಟಣ ತಾಲ್ಲೂಕಿನ ಮಂಜಿಗನಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಪ್ರಚಾರ ಸಭೆಯಲ್ಲಿ ಹೇಳಿಕೊಂಡರು.
ಕೆಲವರು ಚುನಾವಣೆಯಲ್ಲಿ ಚಿಹ್ನೆ ಯಾವುದಿರುತ್ತೆ ಎಂದು ಕೇಳ್ತಿದ್ದರು. ಅಲ್ಲಿ ತೆನೆ ಹೊತ್ತ ಮಹಿಳೆ ಚಿಹ್ನೆ ಇರುತ್ತಾ? ಇಲ್ಲಾ ಕಮಲ ಇರುತ್ತಾ? ಅಂದಿದ್ದಾರೆ. ಯಾರಿಗೂ ಅನುಮಾನ, ಗೊಂದಲ ಬೇಡ. ಅಲ್ಲಿ ತೆನೆ ಹೊತ್ತ ಮಹಿಳೆ ಚಿಹ್ನೆ ಇರುತ್ತದೆ.
ಗೊಂದಲ ಬಗೆಹರಿಸಲು ನಿನ್ನೆಯಿಂದ ಒಂದು ತಂತ್ರ ಮಾಡಿದ್ದೇವೆ. ತೆನೆ ಹೊತ್ತ ಮಹಿಳೆ ನಮ್ಮ ಚಿಹ್ನೆ, ಆ ಮಹಿಳೆ ಹೆಸರು ಕಮಲ. ತೆನೆ ಹೊತ್ತ ಮಹಿಳೆಗೆ ಕಮಲ ಎಂದು ಹೊಸದಾಗಿ ನಾಮಕರಣ ಮಾಡಿದ್ದೇವೆ ಎಂದರು.
ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಪ್ರಜ್ವಲ್, ಇದು ದೇಶಕ್ಕಾಗಿ ನಡೆಯುತ್ತಿರುವ ಚುನಾವಣೆ. ಕೆಲಸದಲ್ಲಿ ನಮಗೆ ಯಾರೂ ಸಾಟಿಯಿಲ್ಲ, ಅವರು ಅಭಿವೃದ್ಧಿ ಬಗ್ಗೆ ಮಾತಾಡಲ್ಲ. ಮಾತೆತ್ತಿದರೆ ರೇವಣ್ಣ ದುರಹಂಕಾರಿ ಅನ್ನುತ್ತಾರೆ. ಅವರಿಗೆ ಸ್ವಲ್ಪ ಸಿಟ್ಟು ಜಾಸ್ತಿ, ಆದರೆ ಅವರ ಹೃದಯದಲ್ಲಿ ಪ್ರೀತಿ ಇದೆ ಎಂದರು.