ಹಾಸನ: ಜಿಲ್ಲೆಗೆ ಸಿಕ್ಕಿರುವ ರಾಷ್ಟ್ರ ಮಟ್ಟದ ಶಿಕ್ಷಕ ಪ್ರಶಸ್ತಿ ಮುಂದಿನ ದಿನಗಳಲ್ಲಿ ನೂರರ ಗಡಿ ದಾಟಲಿ ಎಂದು ಸಂಸದ ಶ್ರೇಯಸ್ ಪಟೇಲ್ ಹಾರೈಸಿದರು.
ತಾಲೂಕಿನ ದುದ್ದ ಹೋಬಳಿ ಕಬ್ಬಳಿ ಗ್ರಾಮದಲ್ಲಿ ನಡೆದ ರಾಷ್ಟಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ.ಜೆ ಶಿವಲಿಂಗಯ್ಯ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ರಾಷ್ಟ್ರ ಪ್ರಶಸ್ತಿ ಪಡೆಯುವುದು ಅಷ್ಟು ಸುಲಭದ ಮಾತಲ್ಲ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿ ರಾಷ್ಟೀಯಯ ಪ್ರಶಸ್ತಿಯನ್ನು ಸ್ವತಃ ರಾಷ್ಟ್ರಪತಿಗಳಿಂದಲೇ ಪಡೆದಿರುವುದು ಕೇವಲ ಕಬ್ಬಳಿ ಗ್ರಾಮಕ್ಕಷ್ಟೇ ಅಲ್ಲ, ಇಡೀ ದೇಶಕ್ಕೆ ಹೆಮ್ಮೆ ತರುವ ಕೆಲಸ ಎಂದರು.
ಬಡತನದ ಕುಟುಂಬದಲ್ಲಿ ಹುಟ್ಟಿ ದೊಡ್ಡ ಸಾಧನೆ ಮಾಡಿರುವ ಶಿವಲಿಂಗಯ್ಯ ಅವರಿಗೆ ಮುಂದಿನ ದಿನಗಳಲ್ಲಿ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲೂ ಗೌರವ ಸಲ್ಲಿಸಲು ಒತ್ತಾಯ ಮಾಡುವುದಾಗಿ ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿವಲಿಂಗಯ್ಯ, ಬಾಲ್ಯದಲ್ಲಿ ತಾವು ಅನುಭವಿಸಿದ ಕಷ್ಟದ ಸನ್ನಿವೇಶಗಳನ್ನು ನೆನೆದರು.
ನನ್ನ ಕಷ್ಟಕ್ಕೆ ಇಂದು ಫಲ ಸಿಕ್ಕಿದೆ. ಹಿಂದೆ ಗುರು-ಶಿಷ್ಯರ ನಡುವೆ ಇದ್ದ ಸಂಬಂಧ ಈಗ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಷ್ಟ್ರಪತಿಯವರಿಂದ ಪ್ರಶಸ್ತಿ ಪಡೆದ ಕ್ಷಣ ತನ್ನ ಜೀವನದಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದಿಡುವ ದಿನ ಎಂದರು.
ಪ್ರಧಾನಿ ಅವರು 2೦ ನಿಮಿಷ ನಮ್ಮೊಂದಿಗೆ ಮಾತನಾಡಿ ಸಾಧನೆಗೆ ಬೆನ್ನು ತಟ್ಟಿದರು ಸಂತಸ ವ್ಯಕ್ತಪಡಿಸಿದರು.
ದುದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ್ ಮಾತನಾಡಿ, ನಮ್ಮೂರಿನ ಒಬ್ಬರು, ರಾಷ್ಟ್ರ ಮಟ್ಟದಲ್ಲಿ ಮಾಡಿರುವ ಸಾಧನೆಗೆ ಬೆಲೆ ಕಟ್ಟಲು ಆಗದು ಎಂದು ಪ್ರಶಂಸಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಗೋಪಾಲ್,
ಬಾಬು ಜಗಜೀವನ ರಾಮ್ ಸಂಘದ ಅಧ್ಯಕ್ಷ ಬಸವರಾಜ್, ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಆರ್‌ಪಿಐ ರಾಜ್ಯಾಧ್ಯಕ್ಷ ಸತೀಶ್, ಕಾಂಗ್ರೆಸ್ ಮುಖಂಡ ಕಬ್ಬಳಿ ರಾಮಚಂದ್ರ, ಹೊಳೆನರಸೀಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷಣ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯೋಗೇಂದ್ರ, ವಕೀಲ ವಿಜಯ್ ಕುಮಾರ್, ಮುಖಂಡರಾದ ಬಾಲು, ಕರೀಗೌಡ, ಶಿವರಾಂ, ಶಿವಸ್ವಾಮಿ, ಪುಟ್ಟಸ್ವಾಮಿ, ಪ್ರದೀಪ್ ಇದ್ದರು.