ಹಾಸನ: ಕಾಡಾನೆ ದಾಳಿಯಿಂದ ಸುಶೀಲಮ್ಮ ಅವರು ಮೃತಪಟ್ಟ ಸ್ಥಳಕ್ಕೆ ಭೇಟಿ ನೀಡಿದ ಸಂಸದ ಶ್ರೇಯಸ್ ಪಟೇಲ್ ಅವರು ಅಲ್ಲಿನ ಪರಿಸ್ಥಿತಿ ಕಂಡು ಮಮ್ಮಲ ಮರುಗಿ ತಲೆ ಮೇಲೆ ಕೈ ಹೊತ್ತು ನಿಂತರು.
ಸಂಸದ ಶ್ರೇಯಸ್‌ಪಟೇಲ್, ಡಿಸಿ ಸಿ.ಸತ್ಯಭಾಮ, ಎಸ್ಪಿ ಮಹಮದ್ ಸುಜೇತಾ, ತಹಸೀಲ್ದಾರ್ ಮಮತಾ, ಸಿಸಿಎಫ್ ಏಡುಕುಂಡಲ, ಡಿಎಫ್‌ಓ ಸೌರಭ್‌ಕುಮಾರ್, ತಹಸೀಲ್ದಾರ್ ಮಮತಾ ಅವರು ಘಟನಾ ಸ್ಥಳಕ್ಕೆ ಕತ್ತಲಿನಲ್ಲಿ ಕಾಲ್ನಡಿಗೆಯಲ್ಲೇ ಬಂದರು.
ಆನೆ ತುಳಿದು ವಿಕಾರವಾಗಿದ್ದ ಶವದ ಮುಖ ಕಂಡ ಕೂಡಲೇ ಸಂಸದ ಶ್ರೇಯಸ್‌ಪಟೇಲ್ ತಲೆ ಮೇಲೆ ಕೈಹೊತ್ತು ನಿಂತರು. ಅಧಿಕಾರಿಗಳು ಸಹ ಭಾವುಕರಾದರು. ಮಹಿಳೆಯ ಮೃತದೇಹ ಕಂಡು ಮರುಕ ವ್ಯಕ್ತಪಡಿಸಿದರು.
ನಂತರ ಮರಣೋತ್ತರ ಪರೀಕ್ಷೆಗಾಗಿ ಶವವನ್ನು ತಾಲ್ಲೂಕು ಆಸ್ಪತ್ರೆಗೆ ರವಾನಿಸಲಾಯಿತು.
ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಂಸದ ಶ್ರೇಯಸ್ ಪಟೇಲ್ – ‘ಇದೇ ನಿಮಗೆ ಕಡೆಯ ಎಚ್ಚರಿಕೆ!’
ಜಿಲ್ಲೆಯಲ್ಲಿ ಆಗುತ್ತಿರುವ ಕಾಡಾನೆ ದಾಳಿಗಳ ಹಿನ್ನೆಲೆ, ಸಾರ್ವಜನಿಕರ ಸುರಕ್ಷತೆ ಮತ್ತು ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಸಂಬಂಧಿಸಿದಂತೆ ಸಂಸದ ಶ್ರೇಯಸ್ ಪಟೇಲ್ ಅಧಿಕಾರಿಗಳಿಗೆ ಗಂಭೀರ ಎಚ್ಚರಿಕೆ ನೀಡಿದರು.
ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಶೈಲಿಯನ್ನು ತೀವ್ರವಾಗಿ ಪ್ರಶ್ನಿಸಿದ ಸಂಸದ, “ಇದೇ ನಿಮಗೆ ಕಡೆಯ ವಾರ್ನಿಂಗ್! ರಾತ್ರಿ ವೇಳೆ ಸೂಚನಾ ಫಲಕಗಳು ಆನ್ ಆಗುತ್ತಿಲ್ಲ. ನೀವು ಏನು ಮಾಡುತ್ತಿದ್ದೀರಿ? ಜನರಿಗೆ ಸರಿಯಾದ ಮಾಹಿತಿ ಕೊಡುತ್ತಿಲ್ಲ!” ಎಂದು ತರಾಟೆಗೆ ತೆಗೆದುಕೊಂಡರು.
ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ ಸಂಸದ ಶ್ರೇಯಸ್ ಪಟೇಲ್, “ಸರಿಯಾಗಿ ಕೆಲಸ ಮಾಡಿ, ಇಲ್ಲವಾದರೆ ಬೇರೇ ಆಯ್ಕೆ ಇರುವುದಿಲ್ಲ!” ಎಂದು ಸ್ಪಷ್ಟವಾಗಿಯೇ ಹೇಳಿದರು.