ಕಾಡಾನೆ ಹಾವಳಿ ತಪ್ಪಿಸಿ; ಕೇಂದ್ರ ಅರಣ್ಯ ಸಚಿವರಿಗೆ ಸಂಸದ ಶ್ರೇಯಸ್ ಪಟೇಲ್ ಮನವಿ

ನವದೆಹಲಿ: ಕೇಂದ್ರ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಭೂಪೇಂದ್ರ ಯಾದವ್ ಅವರನ್ನು ನವದೆಹಲಿಯಲ್ಲಿ ಶುಕ್ರವಾರ ಭೇಟಿಯಾದ ಸಂಸದ ಶ್ರೇಯಸ್ ಪಟೇಲ್, ಹಾಸನ ಜಿಲ್ಲೆಯಲ್ಲಿನ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು.

ಕಳೆದ 21 ವರ್ಷಗಳ ಅವಧಿಯಲ್ಲಿ, ಹಾಸನ ಜಿಲ್ಲೆಯ ಬೇಲೂರು, ಸಕಲೇಶಪುರ ಮತ್ತು ಆಲೂರುಗಳಲ್ಲಿ ಆನೆದಾಳಿಗೆ 71 ಜನರು ಸಾವನ್ನಪ್ಪಿದ್ದಾರೆ. ಇದೊಂದು ಗಂಭೀರ ಸಮಸ್ಯೆಯಾಗಿದ್ದು, ಇದಕ್ಕೆ ತಕ್ಷಣವೇ ಪರಿಹಾರ ಕಂಡುಕೊಳ್ಳುವ ಅನಿವಾರ್ಯತೆಯಿದೆ ಎಂದು ಸಮಸ್ಯೆ ಮನವರಿಕೆ ಮಾಡಿಕೊಟ್ಟರು.

 ಆನೆಗಳಿಗೆ ಅರಣ್ಯ ಪ್ರದೇಶದಲ್ಲಿ ಅವಶ್ಯಕ ನೀರಿನ ವ್ಯವಸ್ಥೆ ಲಭಿಸಲು ಮೇವು ಒದಗಿಸುವ ಮರಗಳನ್ನು ನೆಡಬೇಕು ಮತ್ತು ಆನೆಗಳಿಗೆ ಪ್ರಿಯವಾದ ಬಿದಿರನ್ನು ಹೆಚ್ಚಾಗಿ ಬೆಳೆಯುವಂತೆ ಕ್ರಮ ಕೈಗೊಳ್ಳಬೇಕೆಂದು ಸಚಿವರಲ್ಲಿ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸಮಸ್ಯೆಗೆ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ ಎಂದು ಶ್ರೇಯಸ್ ಹೇಳಿದರು.