ಹಾಸನ: ತಮ್ಮ ಮೇಲಿನ ಎಂಎಲ್‌ಸಿ ಸೂರಜ್‌ರೇವಣ್ಣ ಆರೋಪಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಂಸದ ಶ್ರೇಯಸ್‌ಪಟೇಲ್, ಉದ್ಭವಮೂರ್ತಿ ತರಹ ಎದ್ದು ಬಂದಿರುವ ಅವರು ಬಾಲಿಷವಾಗಿ ಮಾತನಾಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೂರಜ್ ಅವರದ್ದು ಬಾಲಿಷವಾದ ಹೇಳಿಕೆ, ಅದು ಅವರ ವ್ಯಕ್ತಿತ್ವ, ನಡತೆಯನ್ನು ತೋರಿಸುತ್ತದೆ. ಎರಡ್ಮೂರು ಬಾರಿ ಸಚಿವರು, ಐದಾರು ಬಾರಿ ಶಾಸಕರಾಗಿರುವವರ ರೀತಿ ಮಾತನಾಡಿದ್ದಾರೆ.
ವಾಗ್ಮಿ, ದೊಡ್ಡ ಮೇಧಾವಿ ತರಹ ಮಾತನಾಡಿದ್ದಾರೆ.
ಆದರೆ ಅವರಿನ್ನೂ ಒಂದು ಬಾರಿ ಎಂಎಲ್‌ಸಿ ಆಗಿದ್ದಾರೆ. ನಾನು ಜಿ.ಪಂ. ಸದಸ್ಯನಾಗಿದ್ದೇನೆ, ತಳಮಟ್ಟದಿಂದ ಬೆಳೆದಿದ್ದೇನೆ. ಏಕಾಏಕಿ ಅವರ ಕುಟುಂಬದಿಂದ ಅಚಾನಕ್ಕಾಗಿ ಬಂದು ಎಂಎಲ್‌ಸಿ ಆಗಿರುವವರು ಅವರು ಎಂದು ಕಿಡಿಕಾರಿದರು.
ಎಂಎಲ್‌ಸಿ ಆದಮೇಲೆ ಏಳು ಕ್ಷೇತ್ರದಲ್ಲಿ ಒಂದು ಗ್ರಾ.ಪಂ.ಗೆ ಹೋಗಿ ಸಭೆ ಮಾಡಿದ್ದಾರಾ? ಅವರ ಹೇಳಿಕೆಯಿಂದ ನನಗೆ ವೈಯುಕ್ತಿಕವಾಗಿ ಬೇಜಾರಾಗಿದೆ. ರಾಜಕೀಯವಾಗಿ ನಾವು-ಅವರು ಎದುರಾಳಿ. ಯಾವುದೇ ವಿಚಾರದಲ್ಲೂ ನಾನು ಬಗ್ಗುವವನಲ್ಲ ಎಂದರು.
ನಾನು ನಮ್ಮ ತಾತನ ಹೆಸರು ಹೇಳಿಕೊಂಡು ಬಂದವನಲ್ಲ. ಹೋರಾಟ ಮನೋಭಾವ, ತಳಮಟ್ಟದಿಂದ ಬಂದಿರುವವನು ನಾನು. ಅವರ ಹೇಳಿಕೆ ಬೇಜಾರು ತರಿಸಿದೆ. ಬದುಕಿದ್ದವರ ಬಗ್ಗೆ ಮಾತನಾಡಲಿ. ನಾವು ದೇವೇಗೌಡರ ಬಗ್ಗೆ ಯಾವತ್ತಾದರೂ ಮಾತನಾಡಿದ್ದೇವಾ? ಇವತ್ತೂ ಅವರ ಮೇಲೆ ಗೌರವವಿದೆ.
ದೇವೇಗೌಡರು, ಪುಟ್ಟಸ್ವಾಮಿಗೌಡ, ಶ್ರೀಕಂಠಯ್ಯ ಅವರ ಬಗ್ಗೆ ಮಾತನಾಡಲು ನಮಗೆ ಯಾರಿಗೂ ಅರ್ಹತೆ ಇಲ್ಲ, ಯೋಗ್ಯತೆ ಇಲ್ಲ. ಯಾವುದೇ ಪುರಾವೆ ಇಲ್ಲದೆ ನಮ್ಮ ತಾತನ ಹೆಸರು ತೆಗೆದುಕೊಂಡಿದ್ದಾರೆ.ಆ ಘಟನೆಯಾದಾಗ ಅವರ ವಯಸ್ಸು ಎಷ್ಟಿತ್ತು, ಮಾಹಿತಿ ಇತ್ತಾ?
ಅವರ ತಂದೆ ರೇವಣ್ಣ ಅವರೇ ಏಕೆ ಇಷ್ಟು ದಿನ ಮಾತನಾಡಲಿಲ್ಲ? ಅವರ ಕುಟುಂಬದವರು ಯಾರೂ ಮಾತನಾಡಿಲ್ಲ. ಮೈಕ್ ಸಿಕ್ಕಿದೆ, ಜನ ಶಿಳ್ಳೆ ಹೊಡಿತಾರೆ ಅಂಥ ಮಾತನಾಡಿದ್ದಾರಾ? ಎಂದು ಪ್ರಶ್ನಿಸಿದರು.
ಪೆನ್‌ಡ್ರೈವ್ ವಿಚಾರ ನಾನು ಮಾತನಾಡಲ್ಲ. ಎಷ್ಟೋ ಹೆಣ್ಣುಮಕ್ಕಳ ಜೀವನ ಹಾಳಾಗಿದೆ, ಬಲಿಪಶುಯಾಗಿದ್ದಾರೆ. ಅದಕ್ಕೆ ಕಾರಣ ಯಾರು? ಪೆನ್‌ಡ್ರೈವ್ ಒಳಗೆ ಇದ್ದ ವಿಡಿಯೋ ಮಾಡಿದ್ದು ಯಾರು? ಮೊದಲು ಅದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ. ಅವರು ತಮ್ಮ ತಾತನ ಹೆಸರಿನಿಂದ ಗೆದ್ದಿದ್ದಾರೆ. ಎಂಎಲ್‌ಸಿ ತಮ್ಮ ಸಾಧನೆ ಪಟ್ಟಿ ಬಿಡುಗಡೆ ಮಾಡಲಿ. ದೇವೇಗೌಡರು, ರೇವಣ್ಣ ಅವರದ್ದನ್ನು ಬಿಡಿ, ಎಂಎಲ್‌ಸಿ ತಮ್ಮ ಸಾಧನೆ ಏನು ಎಂಬ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.