ಕಟ್ಟಡ ಕುಸಿತ ಪ್ರಕರಣ: ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ ಸಾಂತ್ವನ ಹೇಳಿದ ಸಂಸದ ಶ್ರೇಯಸ್ ಪಟೇಲ್

ಹಾಸನ: ಸಂಸದ ಶ್ರೇಯಸ್ ಪಟೇಲ್ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಬೇಲೂರಿನಲ್ಲಿ ಹಳೇ ಕಟ್ಟಡದ ಸಜ್ಜಾ ಕುಸಿದ ದುರ್ಘಟನೆಯಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು ಹಾಗೂ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

ಈ ದುರಂತದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ನೀಲಮ್ಮನ ಆರೋಗ್ಯ ಸ್ಥಿತಿ ಕುರಿತು ವೈದ್ಯರಿಂದ ಮಾಹಿತಿ ಪಡೆದ ಸಂಸದ, ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡಲು ಆಸ್ಪತ್ರೆ ವೈದ್ಯಾಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದರು.

“ಇಂತಹ ಘಟನೆಗಳು ನಡೆಯಬಾರದು. ಹಳೆಯ ಕಟ್ಟಡಗಳ ಪರಿಸ್ಥಿತಿಯನ್ನು ಪರೀಕ್ಷಿಸಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಸ್ಥಳೀಯ ಆಡಳಿತ ಕಡ್ಡಾಯ ಕ್ರಮ ಕೈಗೊಳ್ಳಬೇಕು” ಎಂದು ಶ್ರೇಯಸ್ ಪಟೇಲ್ ಸೂಚಿಸಿದರು.