ನವದೆಹಲಿ: ಸಂಸದ ಶ್ರೇಯಸ್ ಪಟೇಲ್ ಇಂದು ಕೇಂದ್ರ ಟೆಲಿಕಾಂ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಭೇಟಿಯಾಗಿ, ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ದೂರ ಸಂಪರ್ಕ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಮನವಿ ಪತ್ರ ಸಲ್ಲಿಸಿದರು.
ಹಾಸನ ಲೋಕಸಭಾ ಕ್ಷೇತ್ರದ ಹನ್ನೊಂದು ಗ್ರಾಮಗಳಲ್ಲಿ ಸಮರ್ಪಕ ದೂರಸಂಪರ್ಕ ಸೇವೆಗಾಗಿ ಬಿಎಸ್ಎನ್ಎಲ್ ಟವರ್ ಸ್ಥಾಪಿಸುವಂತೆ ಸಚಿವರಿಗೆ ಮನವಿ ಸಲ್ಲಿಸಿದರು.
ನನ್ನ ಕ್ಷೇತ್ರದಲ್ಲಿ ಬಿಎಸ್ಎನ್ಎಲ್ ಸಂಪರ್ಕ ಸೇವೆಯಲ್ಲಿ ಹಲವಾರು ತೊಡಕುಗಳಿವೆ. ಟವರ್ ಅಸಮರ್ಪಕ ಕಾರ್ಯನಿರ್ವಹಣೆ, ಹಾಳಾದ ಬ್ಯಾಟರಿ – ಯುಪಿಎಸ್ ಮತ್ತಿತರ ಕಾರಣಗಳಿಂದ ಗ್ರಾಮೀಣ ಜನರಿಗೆ ತಡೆರಹಿತ ಮೊಬೈಲ್ ಸೇವೆ ಲಭಿಸುತ್ತಿಲ್ಲ. ಈ ಸಮಸ್ಯೆಗಳ ಕಡೆ ಗಮನ ಹರಿಸಿ, ತೊಂದರೆ ನಿವಾರಿಸಿ, ತಡೆರಹಿತ ಬಿಎಸ್ಎನ್ಎಲ್ ಸೇವೆ ಲಭ್ಯವಾಗುವಂತೆ ಮಾಡಬೇಕು ಎಂದು ಮನವಿ ಮಾಡಿದರು.
ತಾಲೂಕು ಕೇಂದ್ರವಾಗಿರುವ ಆಲೂರಿನ ಅಂಚೆ ಸಂಬಂಧಿ ವ್ಯವಹಾರಗಳು ಹೆಚ್ಚುತ್ತಿದ್ದು, ಇದಕ್ಕಾಗಿ ಪ್ರತ್ಯೇಕ ಅಂಚೆ ಕಚೇರಿ ನಿರ್ಮಿಸಲು ಅನುಮೋದನೆ ನೀಡಬೇಕು. ಕಾಮಗಾರಿಗಾಗಿ ಈಗಾಗಲೇ ಜಾಗ ಅಂತಿಮಗೊಳಿಸಿದ್ದು, ಸಚಿವಾಲಯದ ಅನುಮೋದನೆ ನೀಡಬೇಕಿದೆ ಎಂದು ಸಂಸದರು, ಸಚಿವರ ಗಮನ ಸೆಳೆದರು.
ಶ್ರೇಯಸ್ ಅವರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿಂಧಿಯಾ, ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು.