ಜೆಡಿಎಸ್ ನವರೇ ಕೈಯ್ಯಾರೆ ನಿಖಿಲ್ ಕುಮಾರಸ್ವಾಮಿ ಅವರನ್ನು‌ ಕಳೆದುಕೊಂಡರು; ಸಂಸದ ಶ್ರೇಯಸ್ ಪಟೇಲ್ ವಿಶ್ಲೇಷಣೆ

ಹಾಸನ: ಸೋತ ಕ್ಷೇತ್ರದಲ್ಲೇ ಅವರನ್ನು ಗೆಲ್ಲಿಸದೇ ಪ್ರತಿ ಚುನಾವಣೆಯಲ್ಲೂ ಕ್ಷೇತ್ರ ಬದಲಿಸಿ ಜೆಡಿಎಸ್ ನವರು ಕೈಯ್ಯಾರೆ ನಿಖಿಲ್ ಕುಮಾರಸ್ವಾಮಿ ಅವರನ್ನು ಕಳೆದುಕೊಂಡರು ಎಂದು ಸಂಸದ ಶ್ರೇಯಸ್ ಪಟೇಲ್ ಹೇಳಿದರು.

ಹೊಳೆನರಸೀಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಖಿಲ್ ಕುಮಾರಸ್ವಾಮಿಯವರನ್ನು ಎಲ್ಲಿ ಸೋತಿದ್ದರು ಅಲ್ಲೆ ಗೆಲ್ಲಿಸಬೇಕಿತ್ತು. ಮಂಡ್ಯ ಅಥವಾ ರಾಮನಗರದಲ್ಲೆ ಚುನಾವಣೆ ಮಾಡಬೇಕಿತ್ತು.

ಮೂರು ಬಾರಿಯೂ ಮೂರು ಕ್ಷೇತ್ರಗಳಲ್ಲಿ ಎಲ್ಲಿ ಬೇಕಂದರೆ ಅಲ್ಲಿ ನಿಲ್ಲಿಸಿ ತಪ್ಪು ಮಾಡಿದರು. ಈಗ ಮೂರೂ ಕಡೆಯೂ ಅವರು ಸೋತುಬಿಟ್ಟರು ಎಂದರು.

ಒಂದು ಕಡೆ ಜೆಡಿಎಸ್ ನವರು ಸಿ.ಪಿ.ಯೋಗೇಶ್ವರ್ ಅವರಿಗೆ ಮೋಸ ಮಾಡಿದರು. ಅದರೆ ಚನ್ನಪಟ್ಟಣ ಜನರು ಅವರ ಕೈ ಬಿಡಲಿಲ್ಲ. ಯೋಗೇಶ್ವರ್ ಅವರು ಹೋದ ಕಡೆಯಲ್ಲೆಲ್ಲ ಮಂಕಾಗಿ ಚುನಾವಣೆ ಪ್ರಚಾರ ಮಾಡಿದರು.

ಜೆಡಿಎಸ್ ನಾಯಕರು ಸಿಎಂ ಬಗ್ಗೆ ಟೀಕೆ ಮಾಡಿದರು, ನಮ್ಮ ನಾಯಕರ ಬಗ್ಗೆ ಹೇಗೆ ಬೇಕೋ ಹಾಗೇ ಮಾತನಾಡಿದರು. ಇಂದು ಜನಾದೇಶವನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ನಾವು ಕೂಡ ಇಷ್ಟು ಅಂತರದಲ್ಲಿ ಯೋಗೇಶ್ವರ್ ಗೆಲ್ಲುತ್ತಾರೆ ಎಂದು ಅಂದು ಕೊಂಡಿರಲಿಲ್ಲ ಎಂದರು.