ಹಾಸನ-ಹಿರಿಯೂರು ಎಕನಾಮಿಕ್ ಕಾರಿಡಾರ್ ಯೋಜನೆ ಬೇಗ ಪೂರ್ಣಗೊಳಿಸಿ: ನಿತಿನ್ ಗಡ್ಕರಿಗೆ ಮನವಿ ಸಲ್ಲಿಸಿದ ಸಂಸದ ಶ್ರೇಯಸ್

ನವದೆಹಲಿ: ಕೇಂದ್ರ ಭೂಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾದ ಸಂಸದ ಶ್ರೇಯಸ್ ಪಟೇಲ್, ಹಾಸನ ಕ್ಷೇತ್ರದ ಅಭಿವೃದ್ಧಿ ಯೋಜನೆಗಳ ಕುರಿತು ಸಮಾಲೋಚನೆ ನಡೆಸಿ, ಭಾರತ ಮಾಲಾ ಯೋಜನೆಯಡಿ ರಸ್ತೆ ಅಭಿವೃದ್ಧಿಗೆ ಅನುಮೋದನೆ ಕೋರಿ ಮನವಿ ಸಲ್ಲಿಸಿದರು.

ಹಾಸನ-ರಾಯಚೂರು ಎಕನಾಮಿಕ್ ಕಾರಿಡಾರ್ ನ ಭಾಗವಾದ ಹಾಸನ-ಹಿರಿಯೂರು ಎಕನಾಮಿಕ್ ಕಾರಿಡಾರ್ ಅಭಿವೃದ್ಧಿಯ ಕುರಿತು ಮಾನ್ಯ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದರು.

ಈ ಉದ್ದೇಶಿತ ಹೆದ್ದಾರಿ, ಹಾಸನ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳನ್ನು ಸಂಪರ್ಕಿಸಲಿದೆ. ಇದು ಸರಕು ಸಾಗಾಣಿಕೆ ಮತ್ತು ಸಂಚಾರ ವ್ಯವಸ್ಥೆಯನ್ನು ಇನ್ನಷ್ಟು ಸಮರ್ಥವಾಗಿಸಲಿದೆ. ಪ್ರಸ್ತುತ ಡಿಪಿಆರ್ ಹಂತದಲ್ಲಿರುವ ಹಾಸನ ಹಿರಿಯೂರು ಹೆದ್ದಾರಿ ಯೋಜನೆಯನ್ನು ಕ್ಷಿಪ್ರವಾಗಿ ಪೂರ್ಣಗೊಳಿಸುವಂತೆ ಗಡ್ಕರಿಗೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ಸಚಿವರು, ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಕಾಮಗಾರಿ ವೇಗ ಪಡೆಯುವ ನಿರೀಕ್ಷೆಗಳಿವೆ ಎಂದು ಶ್ರೇಯಸ್ ಹೇಳಿದ್ದಾರೆ.