ಡೆಂಗ್ಯೂ ನಿಯಂತ್ರಣಕ್ಕೆ ತಕ್ಷಣ ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಚೊಚ್ಚಲ ಸಭೆಯಲ್ಲೇ ಸಂಸದ ಶ್ರೇಯಸ್ ಖಡಕ್ ಸೂಚನೆ

ಸಭೆಗೆ ಗೈರಾದವರಿಗೆ ನೋಟಿಸ್| ಶೀಘ್ರ ಸಹಾಯವಾಣಿ ಆರಂಭ

ಹಾಸನ: ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚುತ್ತಿರುವುದರಿಂದ ವೈದ್ಯರು ನಿರ್ಲಕ್ಷ್ಯ ಮಾಡದೆ ರೋಗ ಲಕ್ಷಣ ಹೊಂದಿರುವವರಿಗೆ ತಕ್ಷಣ ಡೆಂಗ್ಯೂ ಪರೀಕ್ಷೆ ಮಾಡಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಮಹಾಮಾರಿ ನಿಯಂತ್ರಣಕ್ಕೆ ತರಬೇಕು ಎಂದು ಸಂಸದ ಶ್ರೇಯಸ್ ಪಟೇಲ್ ವೈದ್ಯರು ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯ ನಂತರ ಮಾತನಾಡಿದ ಅವರು, ಡೆಂಗ್ಯೂ ನಿಯಂತ್ರಣವಾಗುವವರೆಗೆ ಕೋವಿಡ್ ವೇಳೆ ಕೆಲಸ ಮಾಡಿದಂತೆ ಈಗಲೂ ಕಾರ್ಯ ಪ್ರವೃತ್ತರಾಗಬೇಕು ಎಂದು ಕಿವಿ ಮಾತು ಹೇಳಿದರು.

ವೈದ್ಯರು ಗ್ರಾಮೀಣ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ನಿಗಾ ವಹಿಸಬೇಕು, ಯಾರೂ ನಿರ್ಲಕ್ಷ್ಯ ವಹಿಸಬಾರದು, ಸಾರ್ವಜನಿಕರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಪಿಹೆಚ್‌ಸಿಗಳ ಸಮಸ್ಯೆ ಬಗ್ಗೆ ಸಂಬAಧಪಟ್ಟ ಸಚಿವರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅತಿ ಮುಖ್ಯವಾಗಿ ಡೆಂಗ್ಯೂ ಪ್ರಕರಣ ಹೆಚ್ಚಿರುವ ಕಡೆ ನಗರಸಭೆ, ಸ್ಥಳೀಯ ಸಂಸ್ಥೆಗಳು, ಆರೋಗ್ಯ ಇಲಾಖೆ ಒಟ್ಟಾಗಿ ರೋಗ ನಿಯಂತ್ರಣಕ್ಕೆ ತರಬೇಕು ಎಂದರು.

ಆಸ್ಪತ್ರೆಯಲ್ಲಿಯೂ ಡೆಂಗ್ಯೂ ರೋಗಕ್ಕೆ ತುರ್ತು ಚಿಕಿತ್ಸೆ ನೀಡಲು ಬೇಕಾದ ಹಾಸಿಗೆ ಸಿದ್ಧಪಡಿಸಿಕೊಳ್ಳುವುದು, ತಜ್ಞ ವೈದ್ಯರು ಪ್ರತಿನಿತ್ಯ ಆಸ್ಪತ್ರೆಯಲ್ಲಿರಬೇಕು. ಪರೀಕ್ಷೆ ನಡೆಸಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಬೇಕು, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಬೇರೆಡೆಗೆ ಕಳಿಸಿಕೊಡಬೇಕು ಎಂದು ಸೂಚಿಸಿದರು.

ಶೀಘ್ರದಲ್ಲಿ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸ್ವಚ್ಛತೆಗೆ ಆದ್ಯತೆ ನೀಡುವುದರ ಜೊತೆಗೆ ಜನರನ್ನ ಜಾಗೃತಗೊಳಿಸುವ ನಿಟ್ಟಿನಲ್ಲಿ ಅವರಿಗೆ ಸೂಚನೆ ನೀಡಲಾಗುವುದು. ಆಶಾ ಕಾರ್ಯಕರ್ತೆಯರು ಜಾಗೃತಿ ಹೆಸರಿನಲ್ಲಿ ಫೋಟೋ ಮತ್ತು ಡಾಕ್ಯುಮೆಂಟರಿಗೋಸ್ಕರ ಕೆಲಸ ಮಾಡದೆ ಹಳ್ಳಿ ಹಳ್ಳಿಗಳ ಮನೆ ಮನೆಗೆ ತೆರಳಿ ಲಾರ್ವಾಪತ್ತೆ ಮತ್ತು ಸಮೀಕ್ಷೆ ನಡೆಸುವ ಕೆಲಸ ಮಾಡಬೇಕು ಎಂದು ಹೇಳಿದರು.

33 ಮಕ್ಕಳು ದಾಖಲು:
18 ವರ್ಷ ಒಳಪಟ್ಟ ಮಕ್ಕಳಲ್ಲಿ ಡೆಂಗ್ಯೂ ರೋಗ ಹೆಚ್ಚಾಗಿ ಕಾಣ ಸುತ್ತಿದ್ದು, ಈಗಾಗಲೇ ಜಿಲ್ಲೆಯಲ್ಲಿ 33 ಮಕ್ಕಳು ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಅವರಲ್ಲಿ ಎಂಟು ಮಕ್ಕಳು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಾಲಾ ಕಾಲೇಜುಗಳ ಹಂತದಲ್ಲಿ ಜ್ವರದಿಂದ ಬಳಲುತ್ತಿರುವ ಮಕ್ಕಳನ್ನು ತಕ್ಷಣವೇ ಪರೀಕ್ಷೆ ನಡೆಸಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಜನರೂ ಕೂಡ ಜ್ವರ ಬಂದರೆ ವೈದ್ಯರನ್ನ ಭೇಟಿ ಮಾಡಿ ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯ ಎಂದರು.

ಶೀಘ್ರ ಸಹಾಯವಾಣಿ :
ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಹಾಯವಾಣ ಆರಂಭಿಸಲು ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಬೇಕು. ಮತ್ತು ಸಾರ್ವಜನಿಕರು ಯಾವುದೇ ರೀತಿ ಭಯಪಡದೆ ರೋಗದ ಬಗ್ಗೆ ಜಾಗೃತರಾಗಬೇಕು ಮತ್ತು ಅದನ್ನು ಬರೆದಂತೆ ತಡೆಯುವಲ್ಲಿ ಕೂಡ ನಿಮ್ಮ ಪಾತ್ರ ಕೂಡ ಬಹು ಮುಖ್ಯ. ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ ಪಡೆದರೆ ರೋಗ ನಿಯಂತ್ರಣಕ್ಕೆ ತರಬಹುದು. ಈ ನಿಟ್ಟಿನಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕಾಗಿದೆ ಎಂದು ಸಂಸದರು ಹೇಳಿದರು

ಸಭೆಗೆ ಬಾರದ ಅಧಿಕಾರಿಗಳಿಗೆ ನೋಟಿಸ್:
ಸಂಸದ ಶ್ರೇಯಸ್ ಪಟೇಲ್ ಅವರು ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ವೈದ್ಯರೊಂದಿಗೆ ಸಂಸದರಾದ ಮೇಲೆ ಇಂದು ಮೊದಲ ಸಭೆ ನಡೆಸಿದರು.

ಆದರೆ ಈ ಸಭೆಗೆ ಕೆಲವು ವೈದ್ಯಾಧಿಕಾರಿಗಳು ಗೈರು ಹಾಜರಾಗಿದ್ದರು ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸಂಸದರು, ಸಭೆಗೆ ಗೈರಾದವರಿಗೆ ನೋಟಿಸ್ ನೀಡಿ ಮತ್ತು ಸರಿಯಾಗಿ ಕರ್ತವ್ಯ ನಿರ್ವಹಿಸದೆ ಇರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ಡಿಎಚ್‌ಒಗೆ ತಾಕೀತು ಮಾಡಿದರು.