ಹೊಳೆನರಸೀಪುರ: ತಾಲೂಕಿನ ಹಳ್ಳಿ ಮೈಸೂರು ಹೋಬಳಿ ನಗರನಹಳ್ಳಿ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯೊಬ್ಬರು ತಮ್ಮ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ ದಯವಿಟ್ಟು ಸ್ಪಂದಿಸಿ, ಸಮಸ್ಯೆ ಬಗೆಹರಿಸಿ ಎಂದು ವಿಡಿಯೋ ಮೂಲಕ ಮಾಡಿದ್ದ ಮನವಿಗೆ ಸಂಸದ ಶ್ರೇಯಸ್ ಪಟೇಲ್ ಸ್ಪಂದಿಸಿದ್ದಾರೆ.
ಸಮಸ್ಯೆ ತಮ್ಮ ಗಮನಕ್ಕೆ ಬರುತ್ತಿದ್ದಂತೆಯೇ ಇಂದು ಶಾಲೆಗೆ ದೌಡಾಯಿಸಿದ ಶ್ರೇಯಸ್ ಪಟೇಲ್, ಮಕ್ಕಳ ಸಮಸ್ಯೆ ಆಲಿಸಿದರು. ಶಿಕ್ಷಕರೊಂದಿಗೂ ಮಾತುಕತೆ ನಡೆಸಿದ ಅವರು, ಗ್ರಾಮೀಣ ಭಾಗದ, ಅದರಲ್ಲೂ 10 ನೇ ತರಗತಿ ಮಕ್ಕಳಿಗೆ ಯಾವುದೇ ರೀತಿಯಲ್ಲೂ ತೊಂದರೆ ಆಗಬಾರದು ಎನ್ನುವುದು ನನ್ನ ಕಾಳಜಿ. ಈ ಕುರಿತು ತಕ್ಷಣವೇ ಸೂಕ್ತ ಕ್ರಮಗಳನ್ನು ಕೈಗೊಂಡು, ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲ ಕಲ್ಪಿಸಲಾಗುತ್ತದೆ ಎಂದು ಭರವಸೆ ನೀಡಿದರು.
ವಿದ್ಯಾರ್ಥಿಗಳು ಧೈರ್ಯವಾಗಿ ಸಮಸ್ಯೆಯನ್ನು ನನ್ನ ಗಮನಕ್ಕೆ ತಂದಿರುವುದಕ್ಕೆ ಅಭಿನಂದನೆ ಸಲ್ಲಿಸಿದ ಸಂಸದರು, ಶೀಘ್ರವೇ ಶಿಕ್ಷಕರ ಕೊರತೆಗೆ ಅಂತ್ಯ ಹಾಡುವ ಮೂಲಕ ಮಕ್ಕಳ ಉತ್ತಮ ಕಲಿಕೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು. ಇಂತಹ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಮಾಜದ ಸಮಸ್ಯೆ ನಿವಾರಿಸಲು ನೆರವಾಗಬಲ್ಲರು ಎಂದು ಇದೇ ವೇಳೆ ಪ್ರಶಂಸೆ ವ್ಯಕ್ತಪಡಿಸಿದ್ದರು.
ವಿದ್ಯಾರ್ಥಿನಿ ಮನವಿ ಏನು?: ಕೆಲ ದಿನಗಳ ಹಿಂದೆ ಶಾಲೆಯಿಂದಲೇ ವಿಡಿಯೋ ಮಾಡಿ ಹಂಚಿಕೊಂಡಿದ್ದ ವಿದ್ಯಾರ್ಥಿನಿ, ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆ ಹತ್ತಿರ ಬರುತ್ತಿದೆ. ಆದರೆ ನಮ್ಮ ಶಾಲೆಯಲ್ಲಿರುವುದು ಕೇವಲ ಇಬ್ಬರೇ ಶಿಕ್ಷಕರು. ನಿಗದಿತ ಪಾಠಗಳು ಮುಗಿದಿಲ್ಲ. ಹೀಗಾದರೆ ನಾವು ಪರೀಕ್ಷೆ ಬರೆಯುವುದು ಹೇಗೆ ಎಂದು ತಿಳಿಯುತ್ತಿಲ್ಲ. ಕೂಡಲೇ ನಮ್ಮ ಸಮಸ್ಯೆ ಆಲಿಸಿ, ಸ್ಪಂದಿಸಿ ಎಂದು ಸಂಸದರ ಹೆಸರು ಹೇಳಿಯೇ ಮನವಿ ಮಾಡಿದ್ದಳು.
ಇದಕ್ಕೆ ದನಿಗೂಡಿಸಿದ್ದ ಗ್ರಾಮಸ್ಥರೂ ಸದರಿ ಸರ್ಕಾರಿ ಶಾಲೆಯ 10ನೇ ತರಗತಿಯಲ್ಲಿ ಸುಮಾರು 52 ವಿದ್ಯಾರ್ಥಿಗಳಿದ್ದು, ಅವರ ಅನುಕೂಲಕ್ಕೆ ಸಂಬಂಧಪಟ್ಟವರು ಸ್ಪಂದಿಸುವ ಮೂಲಕ ಹಳ್ಳಿ ಮಕ್ಕಳ ಓದಿಗೆ ಸಹಕಾರ ನೀಡಬೇಕು ಎಂದು ಮನವಿ ವಿನಂತಿಸಿದ್ದರು.
ಈ ಹಿನ್ನೆಲೆಯಲ್ಲಿ ಶಾಲೆಗೆ ಭೇಟಿ ನೀಡಿದ ಸಂಸದರು, ಎಲ್ಲರೊಂದಿಗೆ ಚರ್ಚಿಸಿ ಸಂಬಂಧ ಅಧಿಕಾರಿಗಳಿಗೆ ಸೂಚಿಸಿ, ಒಂದೆರಡು ದಿನಗಳಲ್ಲೇ ಹೆಚ್ಚುವರಿ ಶಿಕ್ಷಕರನ್ನು ನೇಮಿಸುವಂತೆ ನಿರ್ದೇಶನ ನೀಡುವುದಾಗಿ ತಿಳಿಸಿದರು.