ಚೌಲ್ಗೆರೆ ಟೋಲ್ ವಿವಾದಕ್ಕೆ ತೆರೆ ಎಳೆದ ಸಂಸದ ಶ್ರೇಯಸ್; ಇನ್ಮುಂದೆ ಟೋಲ್ ಪ್ಲಾಜಾದ 20 ಕಿಮೀ. ವ್ಯಾಪ್ತಿಯ ನಾಗರಿಕರಿಗೆ ಸುಂಕವಿಲ್ಲ

ಹಾಸನ: ರಾಷ್ಟ್ರೀಯ ಹೆದ್ದಾರಿ 75ರ ಚೌಲ್ಗೆರೆ ಟೋಲ್ ಪ್ಲಾಜಾದಲ್ಲಿ ಸುಂಕ ವಸೂಲಿ ಸಂಬಂಧ ಉಂಟಾಗಿದ್ದ ವಿಚಾರಕ್ಕೆ ಸಂಸದ ಶ್ರೇಯಸ್ ಪಟೇಲ್ ಮಾತುಕತೆ ಮೂಲಕ ತೆರೆ ಎಳೆದಿದ್ದಾರೆ.

ಸೋಮವಾರ ಸಂಜೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಳೀಯರು, ಕನ್ನಡಪರ ಸಂಘಟನೆಗಳು, ಟೋಲ್ ಸಿಬ್ಬಂದಿ ಹಾಗೂ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿದ ಸಂಸದರು, ಸಮಸ್ಯೆಯನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಿದರು.

ಸಂಘಟನೆಗಳು ಹಾಗೂ ಸ್ಥಳೀಯರ ಬೇಡಿಕೆ ಆಲಿಸಿದ ಸಂಸದರು, ಸ್ಥಳೀಯರು ತಮ್ಮ ದಿನನಿತ್ಯದ ಓಡಾಟಕ್ಕಾಗಿ ಟೋಲ್ ಪಾವತಿಸಲು ವಿರೋಧ ಹೊಂದಿರುವುದನ್ನು ಗ್ರಹಿಸಿದರು.

ನಂತರ ಟೋಲ್ ಸಂಗ್ರಹಿಸುವ ಗುತ್ತಿಗೆದಾರರೊಂದಿಗೆ ಮಾತನಾಡಿ ಸ್ಥಳೀಯರಿಗೆ ಸುಂಕ ವಸೂಲಿಯಿಂದ ವಿನಾಯಿತಿ ನೀಡುವಂತೆ ಸೂಚಿಸಿದರು.

ಸಂಸದರ ಮಾತಿಗೆ ಒಪ್ಪಿದ ಟೋಲ್ ಕಂಟ್ರಾಕ್ಟರ್, ಸುಂಕ ವಸೂಲಿ ಕೇಂದ್ರದ 20 ಕಿಲೋಮೀಟರ್ ವ್ಯಾಪ್ತಿಯ ಜನರು ಇನ್ನು ಮುಂದೆ ತಮ್ಮ ಆಧಾರ್ ಕಾರ್ಡ್ ತೋರಿಸಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಡುವುದಾಗಿ ತಿಳಿಸಿದರು. ಈ ಮೂಲಕ ವಿವಾದ ಇತ್ಯರ್ಥಗೊಂಡಿತು.