ಕೇಂದ್ರ ಬಜೆಟ್ ಪುಸ್ತಕದಲ್ಲಿ ಕರ್ನಾಟಕದ ಹೆಸರೇ ಇಲ್ಲ ಎನ್ನಲು ಆಗುತ್ತಾ? ರೇವಣ್ಣ ಹೇಳಿಕೆಗೆ ಶ್ರೇಯಸ್ ತಿರುಗೇಟು

ಹಾಸನ, ಮಾ. 11: ರಾಜ್ಯ ಬಜೆಟ್‌ ಪುಸ್ತಕದಲ್ಲಿ ಹಾಸನದ ಹೆಸರಿಲ್ಲ ಎನ್ನುವ ಮಾಜಿ ಸಚಿವ ಎಚ್.ಡಿ. ರೇವಣ್ಣ ಹೇಳಿಕೆಗೆ ತಿರುಗೇಟು ನೀಡಿರುವ ಸಂಸದ ಶ್ರೇಯಸ್ ಪಟೇಲ್,  ‘ಕೇಂದ್ರ ಬಜೆಟ್‌ ಪುಸ್ತಕದಲ್ಲಿ ಕರ್ನಾಟಕ ಹಲವಾರು ರಾಜ್ಯಗಳ ಹೆಸರು ಕಾಣುವುದಿಲ್ಲ. ಹೀಗಿರುವಾಗ ರಾಜ್ಯ ಬಜೆಟ್ ನಲ್ಲಿ ಹಾಸನದ ಹೆಸರು ಇಲ್ಲ ಎಂದು ಆರೋಪಿಸುವುದು ಸರಿಯಲ್ಲ. ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಲಾಗಿದೆ,” ಎಂದರು.

ಪೊಲೀಸರ ವಿರುದ್ಧ ಸುಳ್ಳು ಆರೋಪ ಬೇಡ

ಪೊಲೀಸರ ಕರ್ತವ್ಯ ನಿರ್ವಹಣೆಗೆ ಸಂಬಂಧಿಸಿದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, “ಗಲಾಟೆ ಉಂಟಾದಾಗ ಪೊಲೀಸರು ಸಮರ್ಥವಾಗಿ ನಿಭಾಯಿಸುತ್ತಾರೆ. ಅವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವುದು ತಪ್ಪು. ಯಾರಾದರೂ ಮದ್ಯ ಸೇವಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬುದು ಸತ್ಯವಾಗಿದ್ದರೆ, ಸಾಕ್ಷ್ಯ, ಪುರಾವೆ ನೀಡಲಿ,” ಎಂದರು.

“ನಾವು ಅಭಿವೃದ್ಧಿಗೆ ಬದ್ಧ”

,”ನಾವು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ, ಮುಂದೆಯೂ ಮಾಡುತ್ತೇವೆ. ಹಾಸನ ಜಿಲ್ಲೆಯ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು. ರಚನಾತ್ಮಕ ಸಲಹೆ ನೀಡುವ ಮೂಲಕ ಸಹಕಾರ ನೀಡಬೇಕು,” ಎಂದು ಹೇಳಿದರು.

ಸರ್ಕಾರದ ಸ್ಥಿರತೆ ಕುರಿತು ಸ್ಪಷ್ಟನೆ

“ಸರ್ಕಾರ ನಾಲ್ಕೈದು ತಿಂಗಳಲ್ಲಿ ಬೀಳಲಿದೆ” ಎಂಬ ಎಂಎಲ್‌ಸಿ ಸೂರಜ್‌ ರೇವಣ್ಣ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಂಸದರು, “ನಮ್ಮ ಸರ್ಕಾರ ಸ್ಥಿರವಾಗಿದೆ. 140 ಶಾಸಕರು ನಮ್ಮೊಂದಿಗೆ ಇದ್ದಾರೆ. ರಾಜ್ಯದ ಜನತೆ ಕಾಂಗ್ರೆಸ್‌ಗೆ ಆಶೀರ್ವಾದ ನೀಡಿದ್ದಾರೆ. ಹೀಗಾಗಿ ಸರ್ಕಾರ ಸುಭದ್ರವಾಗಿದೆ,” ಎಂದರು.

 “ಅಲ್ಪಸಂಖ್ಯಾತರಿಗೂ ಹಕ್ಕು ಇದೆ”

ಬಜೆಟ್ ಕುರಿತು ಬಿಜೆಪಿ ನಾಯಕರಿಂದ ‘ಹಲಾಲ್‌ ಬಜೆಟ್’ ಎಂಬ ಟೀಕೆ ಕೇಳಿಬಂದಿರುವ ಬಗ್ಗೆ ಪ್ರತಿಕ್ರಿಯಸಿದ ಶ್ರೇಯಸ್ ಪಟೇಲ್, “ಅಲ್ಪಸಂಖ್ಯಾತರಿಗೂ ಈ ದೇಶದಲ್ಲಿ ಬದುಕುವ ಹಕ್ಕಿದೆ. ನಮ್ಮಲ್ಲೂ ರಕ್ತ ಹರಿಯುತ್ತದೆ, ಅವರಲ್ಲೂ ಹರಿಯುತ್ತದೆ. ಅವರ ಅಭಿವೃದ್ಧಿಗೆ ಇನ್ನಷ್ಟು ಅನುದಾನ ನೀಡಲು ಒತ್ತಾಯಿಸುತ್ತೇನೆ,” ಎಂದು ಹೇಳಿದರು.