ಹಾಸನ, ಜೂನ್ 05, 2025: ಐಪಿಎಲ್ ಚಾಂಪಿಯನ್ಸ್ ಸಂಭ್ರಮಾಚರಣೆಯಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟ ಭೂಮಿಕ್‌ನ ಮೃತದೇಹದ ಅಂತಿಮ ದರ್ಶನ ಪಡೆದ ಬಳಿಕ ಸಂಸದ ಶ್ರೇಯಸ್‌ಪಟೇಲ್ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.
“ಇದೊಂದು ರಾಜ್ಯಕ್ಕೆ ಕರಾಳವಾದ ದಿನ. ಯಾರಿಗೂ ಈ ಸ್ಥಿತಿ ಬರಬಾರದು. ಒಬ್ಬರೇ ಮಕ್ಕಳನ್ನು ಕಳೆದುಕೊಂಡ ತಂದೆ-ತಾಯಿಯ ನೋವು ಗೊತ್ತು. ನನಗಂತೂ ಈ ಘಟನೆಯ ಬಗ್ಗೆ ತೀವ್ರ ವಿಷಾದವಿದೆ,” ಎಂದು ಭಾವುಕರಾಗಿ ಹೇಳಿದರು.
ತನಿಖೆಗೆ ಮುಖ್ಯಮಂತ್ರಿಗಳ ಆದೇಶ
ಮುಖ್ಯಮಂತ್ರಿಗಳು ಈ ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಿದ್ದಾರೆ. “ಯಾವ ಇಲಾಖೆಯ ವೈಫಲ್ಯ, ಯಾವ ಇಲಾಖೆ ತಪ್ಪಿತು ಎಂಬುದು ವರದಿಯಲ್ಲಿ ತಿಳಿಯಲಿದೆ. ಯಾರೇ ತಪ್ಪಿತಸ್ಥರಿದ್ದರೂ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇನೆ,” ಎಂದು ಶ್ರೇಯಸ್‌ಪಟೇಲ್ ಒತ್ತಾಯಿಸಿದರು. “ತನಿಖೆಯಲ್ಲಿ ಸತ್ಯಾಸತ್ಯತೆ ಹೊರಬರಲಿದೆ. ಇದು ತಲಾತಲಾಂತರವಾದರೂ ಮರೆಯಲಾಗದ ದುರ್ಘಟನೆ. ಇಂತಹ ಘಟನೆ ಆಗಬಾರದಿತ್ತು, ಆದರೆ ಆಗಿದೆ,” ಎಂದು ವಿಷಾದಿಸಿದರು.
ಇಂಟಲಿಜೆನ್ಸ್‌ಗೆ ಪ್ರಶ್ನೆ:
ವಿರಾಟ್ ಕೊಹ್ಲಿ ಮತ್ತು ತಂಡದ ಆಗಮನದ ಸಂದರ್ಭದಲ್ಲಿ ಜನಸಂದಣಿ ಸೇರಿತ್ತು. “ಇಂಟಲಿಜೆನ್ಸ್ ಏನು ಮಾಡುತ್ತಿತ್ತು? ಇಷ್ಟು ಜನಸಂಖ್ಯೆ ಸೇರುತ್ತದೆ ಎಂಬ ಮಾಹಿತಿ ಇರಲಿಲ್ವಾ? ಮಾಹಿತಿ ಇದ್ದರೂ ಈ ರೀತಿ ಆಯಿತೆಂಬ ಅನುಭವವಿದೆ,” ಎಂದು ಸಂಸದರು ಪೊಲೀಸ್ ಮತ್ತು ಇತರ ಇಲಾಖೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. “ಬೆಂಗಳೂರು ನಗರದ ವಿವಿಧ ಇಲಾಖೆಗಳು, ಪೊಲೀಸ್ ಇಲಾಖೆ ಮೇಲೆ ನನಗೆ ಅನುಮಾನವಿದೆ. ಇಷ್ಟು ಮಾಹಿತಿ ಇದ್ದರೂ ಬಂದೋಬಸ್ತ್ ಕೊಡಲು ಏಕೆ ಆಗಲಿಲ್ಲ?” ಎಂದು ಪ್ರಶ್ನಿಸಿದರು.
ತಪ್ಪಿತಸ್ಥರ ಮೇಲೆ ಕಠಿಣ ಕ್ರಮ:
“ಹನ್ನೊಂದು ಜನರನ್ನು ನಾನು ಕಳೆದುಕೊಂಡಿದ್ದೇನೆ. ಯಾವ ಇಲಾಖೆಯ ಲೋಪದೋಷ ಎಂಬುದನ್ನು ಪತ್ತೆಹಚ್ಚಬೇಕು. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು,” ಎಂದು ಶ್ರೇಯಸ್‌ಪಟೇಲ್ ಒತ್ತಿ ಹೇಳಿದರು. “ಸಾವಿನ ಮನೆಯಲ್ಲಿ ರಾಜಕೀಯ ಮಾಡಬಾರದು,” ಎಂದು ರಾಜಕೀಯ ದೂರವಿಟ್ಟು ಘಟನೆಯ ಗಂಭೀರತೆಯನ್ನು ಎತ್ತಿ ತೋರಿಸಿದರು.
ಆರ್‌ಸಿಬಿ ಗೆಲುವಿನ ಸಂಭ್ರಮದ ನಡುವೆ ದುರಂತ:
ಆರ್‌ಸಿಬಿ ಗೆದ್ದಿರುವುದು ಬೆಂಗಳೂರಿಗೆ ಹೆಮ್ಮೆಯ ವಿಷಯ ಎಂದು ಹೇಳಿದ ಸಂಸದರು, ಆದರೆ ಈ ದುರ್ಘಟನೆಯಿಂದಾಗಿ ಸಂಭ್ರಮಾಚರಣೆಯೂ ಮಂಕಾಗಿದೆ ಎಂದರು. “ಹಿಂದಿನ ದಿನ ನಾವೆಲ್ಲರೂ ಸಂಭ್ರಮಾಚರಣೆ ಮಾಡಿದ್ದೆವು. ಆದರೆ ಈ ದುರಂತ ಎಲ್ಲವನ್ನೂ ಮೀರಿಸಿದೆ,” ಎಂದು ಬೇಸರ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳು ಈ ಘಟನೆಯ ಬಗ್ಗೆ ಅನುಮಾನದ ಮೇಲೆ ತನಿಖೆಗೆ ಆದೇಶಿಸಿದ್ದಾರೆ. ತನಿಖೆ ವರದಿಯಿಂದ ಘಟನೆಯ ಸಂಪೂರ್ಣ ವಿವರಗಳು ಬಹಿರಂಗವಾಗಲಿವೆ. “ಇಂತಹ ದುರ್ಘಟನೆ ಮತ್ತೆ ಆಗದಂತೆ ಎಚ್ಚರಿಕೆ ವಹಿಸಬೇಕು,” ಎಂದು ಸಂಸದ ಶ್ರೇಯಸ್ ಪಟೇಲ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.