ಮಧು ಬಂಗಾರಪ್ಪ ಅವರಿಂದ ಮಾದರಿಯಾಗುತ್ತಿದೆ ಶಿಕ್ಷಣ ಇಲಾಖೆ; ಸಂಸದ ಶ್ರೇಯಸ್ ಪಟೇಲ್ ಶ್ಲಾಘನೆ

ಅರಕಲಗೂಡು: ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಬಡ ಮಕ್ಕಳಿಗೂ ಉತ್ತಮ ಶಿಕ್ಷಣ ಸಿಗಬೇಕು ಎಂಬ ಆಶಯ ಹೊಂದಿದ್ದು, ಇಲಾಖೆಯಲ್ಲಿರುವ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಿದ್ದಾರೆ ಎಂದು ಸಂಸದ ಶ್ರೇಯಸ್ ಪಟೇಲ್ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದಲ್ಲಿಂದು ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸಚಿವರ ತಂದೆ ಬಂಗಾರಪ್ಪನವರು ಈ ಹಿಂದೆ ಶೈಕ್ಷಣಿಕ ಕ್ಷೇತ್ರದಲ್ಲಿ ದೇಶಮೆಚ್ಚುವ ಕೆಲಸ ಮಾಡಿದ್ದಾರೆ. ಅವರು ಮಾಡಿರುವ ಸರ್ವಾಂಗೀಣ ಸಾಧನೆ ಇಂದೂ ಸಹ ಅಜರಾಮರವಾಗಿದೆ. ಅಂತಹವರ ಪುತ್ರರಾಗಿರುವ ಸಚಿವರು, ದೂರದೃಷ್ಟಿ ಉಳ್ಳವರಾಗಿದ್ದಾರೆ ಎಂದು ಕೊಂಡಾಡಿದರು.

ಶಿಕ್ಷಣ ಇಲಾಖೆಯಲ್ಲಿ ವಿಭಿನ್ನ ರೀತಿಯಲ್ಲಿ ಸುಧಾರಣೆ ತರಲು ಸಚಿವರು ಸಂಕಲ್ಪ ಮಾಡಿದ್ದು, ನಮ್ಮ ಜಿಲ್ಲೆಯಲ್ಲೂ ಶಿಕ್ಷಣ ಕ್ಷೇತ್ರದಲ್ಲಿ ಇರುವ ಸಮಸ್ಯೆಗಳನ್ನು ಅವರ ಗಮನಕ್ಕೆ ತರಲಾಗಿದ್ದು, ಹಂತ ಹಂತವಾಗಿ ಬಗೆಹರಿಸುವ ವಿಶ್ವಾಸ ಇದೆ ಎಂದು ಹೇಳಿದರು.

ಶೈಕ್ಷಣಿಕ ಕ್ಷೇತ್ರದಲ್ಲಿ ಉಂಟಾಗಿರುವ ತೀವ್ರ ಪೈಪೋಟಿ ನಡುವೆ ಸರ್ಕಾರಿ ಶಾಲೆಗಳು ಉಳಿಯಬೇಕು. ಇದಕ್ಕಾಗಿ ನನ್ನ ಬೆಂಬಲ ಸದಾ ಇರಲಿದೆ ಎಂದರು.

ಇದೇ ವೇಳೆ ಇಂದು ಸಚಿವರನ್ನು ಆಹ್ವಾನಿಸಿ ಶಿಕ್ಷಕ ದಿನಾಚರಣೆ ಮಾಡುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇಂದು ಹಬ್ಬದ ವಾತಾವರಣ ನಿರ್ಮಾಣ ಆಗಿದೆ. ಅನೇಕ ಕಡೆಗಳಲ್ಲಿ ಸಾಂಕೇತಿಕವಾಗಿ ಶಿಕ್ಷಕರ ದಿನಾಚರಣೆ ನಡೆದಿದ್ದರೆ, ಅರಕಲಗೂಡಿನಲ್ಲಿ ನಿಜಕ್ಕೂ ಮಾದರಿಯಾಗಿ ನಡೆದಿದೆ ಎಂದರು.

ಇಂದು ಸಮಾಜದಲ್ಲಿ ಶಿಕ್ಷಕರ ಪಾತ್ರ ಅತಿ ಮಹತ್ವವಾದುದು, ಸಾಮಾನ್ಯವಾಗಿ ಪ್ರತಿ ಯಶಸ್ವಿ ಪುರುಷನ ಹಿಂದೆ ಒಬ್ಬ ಹೆಣ್ಣಿರುತ್ತಾಳೆ ಎಂಬ ಮಾತಿದೆ. ಆದರೆ ವಿವಿಧ ಉನ್ನತ ಹುದ್ದೆ ಅಲಂಕರಿಸಿರುವ ಯಶಸ್ವಿ ಪುರುಷರ ಹಿಂದೆ ಶಿಕ್ಷಕರು ಇರುತ್ತಾರೆ ಎಂಬುದು ನನ್ನ ಭಾವನೆ ಎಂದು ಹೇಳಿದರು.

ಶಿಕ್ಷಕರ ಶ್ರಮದಿಂದಲೇ ಒಬ್ಬೊಬ್ಬರು ಒಂದೊಂದು ಸ್ಥಾನಕ್ಕೇರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಅರಕಲಗೂಡು ತಾಲೂಕಿನಲ್ಲಿ ಹಿರಿಯ ಶಾಸಕರಾದ ಮಂಜಣ್ಣ ಹಾಗೂ ಉತ್ತಮ ಅಧಿಕಾರಿಗಳಿದ್ದು, ಒಳ್ಳೆಯ ಕೆಲಸಗಳು ನಡೆಯುತ್ತಿವೆ ಎಂದ ಸಂಸದರು, ಉತ್ತಮ ಕಂದಾಯ ಅಧಿಕಾರಿ ಪ್ರಶಸ್ತಿಗೆ ಭಾಜನರಾಗಿರುವ ಸ್ಥಳೀಯ ತಹಸೀಲ್ದಾರ್‌ಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಚಿವರಾದ ಮಧು ಬಂಗಾರಪ್ಪ, ಸ್ಥಳೀಯ ಶಾಸಕ ಎ.ಮಂಜು, ಡಿಡಿಪಿಐ ಪಾಂಡು, ಬಿಇಒ ನಾರಾಯಣಸ್ವಾಮಿ, ಪಪಂ ಅಧ್ಯಕ್ಷ ಪ್ರದೀಪ್ ಮೊದಲಾದವರಿದ್ದರು.

ಗುರುಗಳು… ಸಾಹೇಬ್ರು:
ತಮ್ಮ ಭಾಷಣದ ಆರಂಭದಲ್ಲಿ ಸ್ಥಳೀಯ ಶಾಸಕ ಮಂಜಣ್ಣ ಅವರು ನನ್ನ ಗುರುಗಳು ಎಂದು ಸಂಭೋದಿಸಿದ ಶ್ರೇಯಸ್, ನಡುವೆ ಮಂಜಣ್ಣ, ಸಾಹೇಬ್ರು ಎಂದು ಹೇಳುವ ತಮ್ಮ ಅಭಿಮಾನ ಹೊರ ಹಾಕಿದರು. ನನ್ನ ರಾಜಕೀಯ ಬೆಳವಣಿಗೆ ಹಿಂದೆ ಮಂಜಣ್ಣ ಅವರ ಶ್ರಮ ಇದೆ. ೨೦೧೬ ರಲ್ಲಿ ನಾನು ಮೊದಲ ಬಾರಿಗೆ ಜಿಪಂ ಸದಸ್ಯರಾಗಲು ಆಗ ನಮ್ಮ ಪಕ್ಷದಲ್ಲೇ ಇದ್ದ ಮಂಜಣ್ಣ ಕಾರಣ, ಈಗ ಸಂಸದನಾಗುವುದಕ್ಕೂ ಅವರ ಸಹಕಾರ ಇದೆ ಎಂದು ಸ್ಮರಿಸಿದರು.