ಸಮಾಜಕ್ಕೆ ಆರ್ಯವೈಶ್ಯ ಸಮುದಾಯದ ಕೊಡುಗೆ ಶ್ಲಾಘನೀಯ: ಸಂಸದ ಶ್ರೇಯಸ್ ಪಟೇಲ್

ಹೊಳೆನರಸೀಪುರ: ಜನಸಂಖ್ಯೆ ದೃಷ್ಟಿಯಿಂದ ಸಣ್ಣದಾದರೂ ಆರ್ಯವೈಶ್ಯ ಸಮುದಾಯ ಸಮಾಜಕ್ಕೆ  ನೀಡುತ್ತಿರುವ ಕೊಡುಗೆ ಅಪಾರವಾಗಿದೆ ಎಂದು  ಸಂಸದ ಶ್ರೇಯಸ್ ಪಟೇಲ್ ಶ್ಲಾಘಿಸಿದರು.

ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಹಾಸನ ಜಿಲ್ಲಾ ಘಟಕ ಮತ್ತು  ಕೊಡಗು ಜಿಲ್ಲಾ ಸಂಘಟನೆಗಳು ಹಮ್ಮಿಕೊಂಡಿದ್ದ ಆರ್ಯವೈಶ್ಯ ಕಲಾವೈಭವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

ಆರ್ಯವೈಶ್ಯ ಸಮಾಜದವರು ಕಲೆ, ಸಂಸ್ಕೃತಿ ಹಾಗೂ ಸಂಘಟನೆಗೆ ಹೆಚ್ಚು ಒತ್ತು ಕೊಡುತ್ತಾರೆ. ಧಾರ್ಮಿಕತೆಗೂ ಆದ್ಯತೆ ನೀಡುತ್ತಾರೆ. ಅವರು ನೀಡುವ ಪ್ರೀತಿ, ಗೌರವ ತುಂಬಾ ಹಿರಿದು. ಹಾಗೆಯೇ ಎರಡೂ ಜಿಲ್ಲೆಗಳ ಸಮುದಾಯವರರು ಒಟ್ಟಿಗೆ ಸೇರಿ ಇಂಥದ್ದೊಂದು ಅರ್ಥ ಪೂರ್ಣ ಕಾರ್ಯಕ್ರಮ ಆಯೋಜಿಸುತ್ತಿರುವುದು ನಿಜಕ್ಕೂ ಸ್ವಾಗತಾರ್ಹ ಎಂದರು.

ನಿಜಕ್ಕೂ ಇದೊಂದು ಐಸಿಹಾಸಿಕ ಮತ್ತು ಅದ್ಭುತ ಕಾರ್ಯಕ್ರಮ ಎಂದು ಬಣ್ಣಿಸಿದ ಸಂಸದರು, ಕಲೆ, ಸಂಸ್ಕೃತಿ ಹಾಗೂ ಧಾರ್ಮಿಕವಾಗಿಯೂ ಈ ಸಮುದಾಯ ಕೊಡುವ ಪ್ರಾಮುಖ್ಯತೆ ಬೇರೆಲ್ಲೂ ಕಾಣಸಿಗುವುದಿಲ್ಲ ಎಂದು ಹೇಳಿದರು. ಕೋವಿಡ್ ಸಂದರ್ಭದಲ್ಲಿ ಈ ಸಮುದಾಯ ಜನಪರ, ಜೀವಪರವಾದ ಕೆಲಸ ಮಾಡಿದೆ. ಅದನ್ನು ನಾನೆಂದೂ ಮರೆಯುವುದಿಲ್ಲ. ಈ ಸಮಾಜದ ಯಾವುದೇ ಸಮಸ್ಯೆ ಇದ್ದರೂ ಬಗೆಹರಿಸಲು ನನ್ನ ಕಡೆಯಿಂದ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಭರವಸೆ ನೀಡಿದರು.