ಎಲ್ಲಿ ಹೋದರೂ ಕಿತಾಪತಿ ಮಾಡಿ, ಬೆಂಕಿ ಹಚ್ಚಿ ಬರ್ತಾರೆ; ಮುಂದೆ ಜನ ಅತಿ ದೊಡ್ಡದಾಗಿ ಬುದ್ಧಿ ಕಲಿಸ್ತಾರೆ ಎಂಎಲ್ಸಿ ಸೂರಜ್ ವಿರುದ್ಧ ಶ್ರೇಯಸ್ ಪಟೇಲ್ ಕಿಡಿ

ಹಾಸನ: ಅವರು ಎಲ್ಲಿಯೇ ಹೋದರೂ ಕಿತಾಪತಿ ಮಾಡಿ, ಬೆಂಕಿ ಹಚ್ಚಿ ಬರುತ್ತಾರೆ ಎಂದು ಸಂಸದ ಶ್ರೇಯಸ್‌ಪಟೇಲ್, ಎಂಎಲ್‌ಸಿ ಸೂರಜ್‌ರೇವಣ್ಣ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

ಹತಾಶೆ, ಮಾನಸಿಕ ಸ್ಥಿಮಿತತೆ ಕಳೆದುಕೊಂಡಾಗ ಈ ರೀತಿ ಮಾತು ಬರುತ್ತದೆ. ಜನ ಎಲ್ಲವನ್ನೂ ನೋಡುತ್ತಿದ್ದಾರೆ. ಇಡೀ ಜಿಲ್ಲೆಗೆ ಬೆಂಕಿ ಹಚ್ಚಿಸುತ್ತಾರೆ, ಎಲ್ಲೇ ಹೋದರೂ ಕಿತಾಪತಿ ಮಾಡಿ ಬರ್ತಾರೆ ಎಂದು ಕಿಡಿಕಾರಿದರು.

ಯಾವ ಊರಿಗೆ ಹೋದರೂ ಕಿತಾಪತಿ ಮಾಡಿ ಬರ್ತಾರೆ, ಅದೇ ಅವರ ಕೆಲಸ. ಅವರ ಕಾರ್ಯಕರ್ತರ ಮೇಲೆ ನಾವು ಕೇಸ್ ಹಾಕ್ಸಿದ್ರೆ ದಾಖಲೆ ಕೊಡಲಿ. ನಮ್ಮ ಜಿಲ್ಲೆಯ ಅಧಿಕಾರಿಗಳು ಪ್ರಾಮಾಣಿಕವಾಗಿ, ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ. ಅವರ ಕುಟುಂಬದವರ ಮೇಲೆಲ್ಲಾ ಕೇಸ್ ಆಗಿದೆ ಎಂದರು.

ಇನ್ನು ಅವರ ಕಾರ್ಯಕರ್ತರ ಮೇಲೆ ಕೇಸ್ ಏಕೆ ಹಾಕ್ತಾರೆ? ಅಸೂಯೆಯಿಂದ ಈ ರೀತಿ ಮಾತನಾಡಿದ್ದಾರೆ. ದೇವೇಗೌಡರ ಕುಟುಂಬದಿಂದ ಬಂದವರು ಅದರ ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕು. ಅವರು ವೈದ್ಯರಾಗಿದ್ದವರು, ಇಷ್ಟು ಸಣ್ಣತನದ ರಾಜಕಾರಣ ಮಾಡುತ್ತಿದ್ದಾರೆ.

ಈಗಾಗಲೇ ಜನ ಬುದ್ದಿ ಕಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಅತಿ ದೊಡ್ಡದಾಗಿ ಬುದ್ದಿ ಕಲಿಸುತ್ತಾರೆ. 2028 ರ ಚುನಾವಣೆಯಲ್ಲಿ ಯಾರ‌್ಯಾರು ಏನಾಗುತ್ತಾರೆ ಗೊತಾಗುತ್ತೆ. ಜನ ಇವರ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅಭಿವೃದ್ಧಿ ಕೆಲಸಕ್ಕೆ ಬೆಂಬಲ ಕೊಡಲಿ,‌ ಇಲ್ಲಾ ಸುಮ್ಮನೆ ಇರಲಿ ಎಂದರು.