ಹೊಳೆನರಸೀಪುರ: ಹಾಸನದಲ್ಲಿ ಡಿ. 5 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವವನ್ನು ಬಲಪಡಿಸುವ ದೃಷ್ಟಿಯಿಂದ ಹಿಂದುಳಿದ ಮತ್ತು ಶೋಷಿತ ಸಮುದಾಯಗಳ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿರುವ ವಿಭಾಗೀಯ ಮಟ್ಟದ ಸ್ವಾಭಿಮಾನಿ ಸಮಾವೇಶಕ್ಕೆ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಸಾವಿರಾರು ಅಭಿಮಾನಿಗಳು ಭಾಗವಹಿಸಲು ಕಾಂಗ್ರೆಸ್ ಮುಖಂಡರು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಂಸದ ಶ್ರೇಯಸ್ ಎಂ.ಪಟೇಲ್ ಹೇಳಿದರು.
ಪಟ್ಟಣದ ಎಸ್. ಜಿ. ಅನುಪಮ ರೈಸ್ ಮಿಲ್ ಆವರಣದಲ್ಲಿ ಸಮಾವೇಶದ ಪೂರ್ವ ಸಿದ್ಧತೆಗಾಗಿ ಆಯೋಜಿಸಿದ್ದ ಹೊಳೆನರಸಿಪುರ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಹಳೆಕೋಟೆ, ಕಸಬಾ, ಪಟ್ಟಣ ಹಾಗೂ ತಾಲೂಕಿನ ಹಳ್ಳಿ ಮೈಸೂರು ಹೋಬಳಿಯ ಕಾಂಗ್ರೆಸ್ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾವೇಶ ಇತಿಹಾಸದ ಪುಟ ಸೇರಲಿದ್ದು ಶುದ್ಧಹಸ್ತದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಜೆಡಿಎಸ್ ಮತ್ತು ಬಿಜೆಪಿಯವರು ಸಲ್ಲದ ಆರೋಪ ಮಾಡುತ್ತಿದ್ದಾರೆ ಈ ಎಲ್ಲಾ ಅಪಪ್ರಚಾರಗಳಿಗೆ ಬೃಹತ್ ಸಮಾವೇಶದ ಮೂಲಕ ಉತ್ತರ ನೀಡಲಿದ್ದು ನಮ್ಮ ಕಾಂಗ್ರೆಸ್ ನೇತೃತ್ವದ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಸೇರಿದಂತೆ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಈ ವರಿಗೆ ಸಾಮಾನ್ಯ ಜನರಿಗಾಗಿ ನಮ್ಮ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಸಾಧನೆಗಳನ್ನು ಸವಿವರವಾಗಿ ತಿಳಿಸಿ ಕೊಡುವ ಪ್ರಮುಖ ಉದ್ದೇಶ ಇದರ ಹಿಂದಿದೆ ಎಂದರು.
ಸಮಾವೇಶದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದು 5 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಪ್ರತಿಯೊಬ್ಬರೂ ಪ್ರತಿಯೊಂದು ಹಂತದಲ್ಲಿಯೂ ಒಗ್ಗಟ್ಟು ಕಾಪಾಡಿಕೊಳ್ಳಬೇಕು. ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿ ಗ್ರಾಮದಲ್ಲಿ ಸಮಾವೇಶದ ಮಹತ್ವ ಕುರಿತು ಜಾಗೃತಿ ಮೂಡಿಸುವುದರ ಮೂಲಕ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಿಂದ ಕನಿಷ್ಠ 50 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಭಾಗವಹಿಸುವಂತಾಗಬೇಕು ಎಂದರು.
ಕೆಪಿಸಿಸಿ ಸದಸ್ಯೆ ಅನುಪಮ ಮಹೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್ಟಿ.. ಲಕ್ಷ್ಮಣ, ಮುಖಂಡರಾದ ಮಂಜೇಗೌಡ, ಪುಟ್ಟೇಗೌಡ, ಗಿರೀಶ್, ಎಲ್ ಡಿ ಬಸವರಾಜು, ಸುದರ್ಶನ್ ಬಾಬು, ಶೃತಿ, ರಾಮಚಂದ್ರ, ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಶಿವಕುಮಾರ್, ಕೆಡಿಪಿ ಸದಸ್ಯರಾದ ಕೆ ಕೆ ಲೋಕೇಶ್, ಸುರೇಶ್ ಎಚ್ಆರ್, ಪ್ರಸಾದ್, ಮಹಮದ್ ರಿಯಾಜ್, ಬಿ ಎಂ ಬಸವರಾಜು, ಆರ ರಂಗಸ್ವಾಮಿ, ಜಿ.ಪಂ. ಮಾಜಿ ಸದಸ್ಯ ಪ್ರಸನ್ನ, ಮುಜಾ ಹಿದ್ ಪಾಷ, ಸೇರಿದಂತೆ ಆಯಾ ಹೋಬಳಿಯ ನೂರಾರು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.