ಹಾಸನ ವಿವಿ ಉಳಿಸಲು ಸಿಎಂ, ಡಿಸಿಎಂ ಭೇಟಿ, ಪಕ್ಷ ಭೇದವಿಲ್ಲದ ಹೋರಾಟ – ಸಂಸದ ಶ್ರೇಯಸ್. ಎಂ. ಪಟೇಲ್ ಭರವಸೆ

ಹಾಸನ: ಹಾಸನ ವಿಶ್ವವಿದ್ಯಾಲಯ ಉಳಿಸಲು ಯಾವುದೇ ರಾಜಕೀಯ ಭೇದಭಾವವಿಲ್ಲದೆ ನಿರಂತರ ಹೋರಾಟ ಮಾಡಲಾಗುವುದು ಎಂದು ಸಂಸದ ಶ್ರೇಯಸ್ ಎಂ. ಪಟೇಲ್ ಭರವಸೆ ನೀಡಿದರು.

ಹಾಸನ ವಿವಿ ಉಳಿಸಿ ಹೋರಾಟ ಸಮಿತಿಯ ನಿಯೋಗವನ್ನು ಈ ವಾರದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರನ್ನು ಭೇಟಿ‌ ಮಾಡಿಸಿ ವಿವಿಯ ಭವಿಷ್ಯ ಕುರಿತು ಚರ್ಚಿಸಲಾಗುವುದು ಎಂದು ಅವರು ತಿಳಿಸಿದರು.

ದುಂಡು ಮೇಜಿನ ಸಭೆಯಲ್ಲಿ ಮಹತ್ವದ ನಿರ್ಧಾರ
ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಹಾಸನ ವಿವಿ ಉಳಿಸಲು ನಡೆದ ದುಂಡು ಮೇಜಿನ ಸಭೆಯಲ್ಲಿ ಮಾತನಾಡಿದ ಸಂಸದರು, ವಿಶ್ವವಿದ್ಯಾಲಯದ ಮುಂದಿನ ಗತಿ ಕುರಿತು ಸುದೀರ್ಘ ಚರ್ಚೆ ನಡೆಯಿತು. “ಜಿಲ್ಲೆಯ ಅಭಿವೃದ್ಧಿ ವಿಚಾರ ಬಂದಾಗ ಪಕ್ಷಭೇದ ಮರೆತು ಒಗ್ಗೂಡಿ ಕಾರ್ಯನಿರ್ವಹಿಸಬೇಕು. ಜನರ ಪರ ನಿಂತು, ವಿವಿಯ ಉಳಿವಿಗೆ ಸರ್ಕಾರದ ಗಮನ ಸೆಳೆಯುತ್ತೇವೆ” ಎಂದು ಅವರು ಹೇಳಿದರು.

ಹಾಸನ ವಿವಿಯನ್ನು ಮುಚ್ಚುವ ಸಂಬಂಧ ಯಾವುದೇ ಅಧಿಕೃತ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ ಎಂಬ ಮಾಹಿತಿ ನೀಡಿದ ಅವರು, “ಯಾರೂ ಗಾಬರಿ ಪಡಬೇಡಿ. ನಾನು ನಿಮ್ಮ ಜೊತೆಯಿದ್ದೇನೆ” ಎಂದು ಭರವಸೆ ನೀಡಿದರು.

 ವಿಲೀನದ ಆತಂಕ– ಶಾಸಕ ಎ. ಮಂಜು
ಮಾಜಿ ಸಚಿವ ಹಾಗೂ ಹಾಸನ ಶಾಸಕರಾದ ಎ. ಮಂಜು, ವಿಶ್ವವಿದ್ಯಾಲಯ ಉಳಿಸುವ ಕಾರ್ಯದಲ್ಲಿ ತಡವಾಗಿದೆ ಎಂಬ ಆತಂಕ ವ್ಯಕ್ತಪಡಿಸಿದರು. “ಯಾವುದೇ ಸರ್ಕಾರ ಕಾಲೇಜುಗಳನ್ನು ಮುಚ್ಚಲು ಸಾಧ್ಯವಿಲ್ಲ, ಆದರೆ ಅವು ವಿಲೀನಗೊಳ್ಳುವ ಸಾಧ್ಯತೆ ಇದೆ. ಹಾಸನ ವಿವಿ ಇಲ್ಲಿಯೇ ಉಳಿಯಬೇಕು ಎಂಬುದರ ಬಗ್ಗೆ ಗಂಭೀರ ನಿರ್ಧಾರ ಬೇಕಾಗಿದೆ” ಎಂದು ಅವರು ಅಭಿಪ್ರಾಯಪಟ್ಟರು.

“ವಿವಿ ಅಭಿವೃದ್ಧಿ ಅಗತ್ಯ”
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಚ್.ಎಲ್. ಮಲ್ಲೇಶ್ ಗೌಡ, ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳ ಅಗತ್ಯವನ್ನು ಸವಿವರವಾಗಿ ವಿವರಿಸಿದರು. “ಸರ್ಕಾರಿ ವಿವಿಗಳು ನಾಶವಾಗುತ್ತಾ ಹೋದರೆ, ಖಾಸಗಿ ಸಂಸ್ಥೆಗಳ ಹಿಡಿತ ಬಲವಾಗುತ್ತದೆ, ಇದು ಶಿಕ್ಷಣ ಕ್ಷೇತ್ರದಲ್ಲಿ ಬಂಡವಾಳ ಶಾಹಿಯ ತಾಂಡವ ಮಾಡಲು ದಾರಿ ಮಾಡಿಕೊಡುತ್ತದೆ” ಎಂದು ಅವರು ಎಚ್ಚರಿಸಿದರು.

ಹೋರಾಟದಲ್ಲಿ ಭಾಗಿಯಾದ ಮುಖಂಡರು
ಹಾಸನ ವಿವಿ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷ ಡಾ. ವೈ.ಎಸ್. ವೀರಭದ್ರಪ್ಪ, ಆರ್.ಪಿ. ವೆಂಕಟೇಶ್ ಮೂರ್ತಿ, ಧರ್ಮೇಶ್, ಹೆಚ್.ಕೆ. ಸಂದೇಶ್, ಹುಡಾ ಮಾಜಿ ಅಧ್ಯಕ್ಷ ನವಿಲೆ ಅಣ್ಣಪ್ಪ, ಬಿ.ಕೆ. ಮಂಜುನಾಥ್, ಹೆಚ್.ಪಿ. ಮೋಹನ್, ಹಿರಿಯ ಪತ್ರಕರ್ತ ವೆಂಕಟೇಶ್, ಹೆಚ್.ಆರ್. ನವೀನ್ ಕುಮಾರ್, ಎಂ.ಜಿ. ಪೃಥ್ವಿ, ಸಾಹಿತಿ ರೂಪ ಹಾಸನ್, ಜ.ನಾ. ತೇಜಶ್ರೀ, ತಾರಾಚಂದನ್, ರಮೇಶ್, ಎಂ.ಬಿ. ಪುಷ್ಪ, ಸಮೀರ್, ಅಹಮದ್ ಹಗರೆ, ಸುಭಾಷ್ ಸೇರಿದಂತೆ ಹಲವರು ಈ ಸಭೆಯಲ್ಲಿ ಭಾಗವಹಿಸಿದರು.

ಹಾಸನ ವಿಶ್ವವಿದ್ಯಾಲಯ ಉಳಿಸಲು ಸರ್ಕಾರ ಹಾಗೂ ಪ್ರತಿಪಕ್ಷದ ನಾಯಕರು ಒಗ್ಗೂಡಿ ಹೋರಾಟ ಮುಂದುವರಿಸಲು ನಿರ್ಧಾರ ಮಾಡಿದ್ದಾರೆ. ಮುಚ್ಚುವ ಯಾವುದೇ ನಿರ್ಧಾರ ಇನ್ನೂ ಆಗಿಲ್ಲ ಎಂದು ಸ್ಪಷ್ಟನೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಸಿಎಂ, ಡಿಸಿಎಂ ಮತ್ತು ಶಿಕ್ಷಣ ಸಚಿವರ ಜತೆ ಚರ್ಚಿಸಿ, ವಿವಿಯ ಉಳಿವಿಗೆ ಕ್ರಮ ಕೈಗೊಳ್ಳಲಾಗುವುದು.