ಬಂಧಿತ ವಿಕ್ರಂ ಸಿಂಹಗೆ ಹೈಪರ್‌ ಟೆನ್ಷನ್; ಹಿಮ್ಸ್‌ ನಲ್ಲಿ ಚಿಕಿತ್ಸೆ

ಹಾಸನ: ನಂದಗೋಡನಹಳ್ಳಿಯಲ್ಲಿ ಅಕ್ರಮವಾಗಿ ಮರ ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಸಂಸದ ಪ್ರತಾಪ್ ಸಿಂಹ ಸಹೋದರ, ವಿಕ್ರಂ ಸಿಂಹ ಅವರ ರಕ್ತದೊತ್ತಡ ಹೆಚ್ಚಿನ ಹಿನ್ನೆಲೆಯಲ್ಲಿ ಭಾನುವಾರ ಹಿಮ್ಸ್‌ ನಲ್ಲಿ ಚಿಕಿತ್ಸೆ ಕೊಡಿಸಿ ವಿಚಾರಣೆಗೆ ಕರೆದೊಯ್ಯಲಾಯಿತು.

ಬೆಳಗ್ಗೆ ವಿಕ್ರಂ ಅವರನ್ನು ಗೆಂಡೆಕಟ್ಟೆ ಅರಣ್ಯ ಇಲಾಖೆ ವಸತಿ ಗೃಹದಲ್ಲಿ ವಿಚಾರಣೆಗೊಳಪಡಿಸಿದಾಗ ತಲೆಸುತ್ತು ಕಾಣಿಸಿಕೊಂಡಿತು. ತಕ್ಷಣ ಅವರನ್ನು ಅರಣ್ಯ ಸಿಬ್ಬಂದಿ ಹಿಮ್ಸ್‌ ಆಸ್ಪತ್ರೆಗೆ ಕರೆತಂದು ಆರೋಗ್ಯ ತಪಾಸಣೆ ನಡೆಸಿದರು. ಆಗ ರಕ್ತದೊತ್ತಡದಲ್ಲಿ ತೀವ್ರ ಏರಿಕೆ ಕಂಡು ಬಂದಿತು.

ಹೀಗಾಗಿ ಅವರಿಗೆ ಚಿಕಿತ್ಸೆ ನೀಡಿ ಒಂದು ಗಂಟೆ ವಿರಮಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದರು. ಅದರಂತೆ ಒಂದು ಗಂಟೆ ಹಿಮ್ಸ್ ನಲ್ಲಿ ನಿಗಾದಲ್ಲಿರಿಸಿ ನಂತರ ಮರಳಿ ಗೆಂಡೆಕಟ್ಟೆಗೆ ಕರೆದೊಯ್ದು ವಿಚಾರಣೆ ನಡೆಸಲಾಗುತ್ತಿದೆ.