ಪ್ರೀತಂಗೌಡರ ಜತೆಯೂ ಮಾತಾಡ್ತೀನಿ; ಇದೇ ಮೊದಲ ಬಾರಿಗೆ ಸ್ನೇಹಹಸ್ತ ಚಾಚಿದ ಸಂಸದ ಪ್ರಜ್ವಲ್

ನಮ್ಮ ಪಕ್ಷದ ಪೂರ್ವಭಾವಿ ಸಭೆಗಳು ನಡೆದಿವೆ. ಈಗ ಜಂಟಿ ಪೂರ್ವಭಾವಿ ಸಭೆಗಳು‌ ನಡೆಯಬೇಕು

ಹಾಸನ: ಲೋಕಸಭೆ ಚುನಾವಣೆ ಟಿಕೆಟ್ ಘೋಷಣೆ ಸಮೀಪಿಸುತ್ತಿರುವಂತೆ ಚುರುಕಾಗಿ ಓಡಾಡುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ, ಮೈತ್ರಿ ಪಕ್ಷ ಬಿಜೆಪಿ ನಾಯಕರೆಡೆಗೆ ಸ್ನೇಹಹಸ್ತ ಚಾಚಿದ್ದು, ಮುಂದಿನ ದಿನಗಳಲ್ಲಿ ಮಾಜಿ ಶಾಸಕ ಪ್ರೀತಂಗೌಡರ ಜತೆಯೂ ಮಾತನಾಡುತ್ತೇನೆ ಎಂದರು.

ಸಂಸದ ನಿವಾಸದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಜ್ವಲ್‌ರೇವಣ್ಣ, ಟಿಕೆಟ್ ಅನೌನ್ಸ್ ಆದ್ಮೇಲೆ ಎರಡೂ ಪಕ್ಷದವರು ಸೇರಿ ಎಲ್ಲಾ ಭಾಗದಲ್ಲೂ ಸಭೆ ಮಾಡ್ತಿವಿ ಎಂದರು.

ಕಡೂರಿನಲ್ಲಿ ಬೆಳ್ಳಿಪ್ರಕಾಶ್ ,ಬೇಲೂರು ಶಾಸಕ ಎಚ್.ಕೆ.ಸುರೇಶ್, ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಜತೆ ಮಾತನಾಡಿದ್ದೀನಿ, ಅರಕಲಗೂಡಿನ ಯೋಗರಮೇಶ್ ಸೇರಿ ಎಲ್ಲ ಬಿಜೆಪಿ ಮುಖಂಡರೊಂದಿಗೂ ಮಾತನಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ ಎಂದರು.

ಮೊದಲು ಸ್ಥಳೀಯ ಮಟ್ಟದಲ್ಲಿ ಸಭೆ ಮಾಡುತ್ತೇವೆ. ನಂತರ ದೊಡ್ಡಮಟ್ಟದ ರ‌್ಯಾಲಿ ನಡೆಸುತ್ತೇವೆ. ಯಡಿಯೂರಪ್ಪ, ವಿಜಯೇಂದ್ರ ಅಣ್ಣ, ಕುಮಾರಣ್ಣ ಆಗಮಿಸುವಾಗ ರ‌್ಯಾಲಿಗೂ ಮುನ್ನ ಪೂರ್ವಭಾವಿ ಸಭೆ ಮಾಡ್ತೇವೆ. ನಮ್ಮ ಪಕ್ಷದ ಪೂರ್ವಭಾವಿ ಸಭೆಗಳು ನಡೆದಿವೆ. ಈಗ ಜಂಟಿ ಪೂರ್ವಭಾವಿ ಸಭೆಗಳು‌ ನಡೆಯಬೇಕು ಎಂದರು.

ಮಾ.12-15 ರೊಳಗೆ ಚುನಾವಣೆ ಅನೌನ್ಸ್ ಆಗಬಹುದು. ದೇವೇಗೌಡರು ಎಲ್ಲಾ ಕಡೆ ಪ್ರಚಾರ ಮಾಡುತ್ತಾರೆ.ದೇವೇಗೌಡರಿಗೆ ಹೆಚ್ಚು ಅನುಭವವಿದೆ. ಎಲ್ಲವನ್ನೂ ಸರಿ ಮಾಡುವ ಕೆಲಸ ಮಾಡ್ತಿನಿ ಎಂದರು.