ಹಾಸನ ಬಿಜೆಪಿ ಮುಖಂಡರ ವಿರೋಧ ಗಮನಕ್ಕೆ ಬಂದಿಲ್ಲ; ಬಿಜೆಪಿ- ಜೆಡಿಎಸ್ ಮೈತ್ರಿಯಲ್ಲಿ ಸಮಸ್ಯೆ ಇಲ್ಲ ಅಂದರು ಪ್ರಜ್ವಲ್ ರೇವಣ್ಣ

ನಾನು ಕೂಡ ಯಡಿಯೂರಪ್ಪ ಸಾಹೇಬರ ಟೈಂ ಕೇಳಿ ನಾಳೆ, ನಾಡಿದ್ದರೊಳಗೆ ಭೇಟಿ ಮಾಡ್ತಿನಿ.

ಹಾಸನ: ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಯಾವುದೇ ಸಮಸ್ಯೆ ಇಲ್ಲ, ದೇವೇಗೌಡರು ಕೇಂದ್ರದಿಂದ ಬಂದಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿಯವರೊಂದಿಗೆ ಕುಳಿತು ಮಾತನಾಡಿ ಸೀಟು ಹಂಚಿಕೆ ಬಗ್ಗೆ ಚರ್ಚಿಸಲಿದ್ದಾರೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.

ಮೈತ್ರಿ ವಿಚಾರವಾಗಿ ಮಾಜಿಸಿಎಂ ಎಚ್.ಡಿ.ಕುಮಾರಸ್ವಾಮಿ ಅಸಮಾಧಾನ ಹೊರಹಾಕಿರುವ ಬಗ್ಗೆ ವಕೀಲರ ಸಂಘದಲ್ಲಿ ಮತಯಾಚನೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ನಾವು ಒಂದು ಸೀಟ್ ಹೆಚ್ಚುವರಿಯಾಗಿ ಕೇಳುತ್ತಿದ್ದೇವೆ. ಅದರ ಬಗ್ಗೆ ಚರ್ಚೆ ಆಗುತ್ತೆ, ಚರ್ಚೆ ಆದ್ಮೇಲೆ ಎಲ್ಲಾ ಸರಿ ಹೋಗುತ್ತೆ.ಅದರ ಬಗ್ಗೆ ಏನು ತೊಂದರೆ ಇಲ್ಲ ಎಂದರು.

ಹಾಸನದಲ್ಲಿ ಬಿಜೆಪಿ ನಾಯಕರ ವಿರೋಧ ನನ್ನ ಗಮನಕ್ಕೆ ಬಂದಿಲ್ಲ, ನನ್ನ ಗಮನಕ್ಕೆ ಬಂದರೆ ಚರ್ಚೆ ಮಾಡ್ತಿನಿ. ನಾವು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡ್ತಾ ಇದ್ದೀವಿ ಎಂದರು.

ಬಿಜೆಪಿಯ ಹಿರಿಯ ಮುಖಂಡರು, ಕಾರ್ಯಕರ್ತರು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ನಾನು ಕೂಡ ಯಡಿಯೂರಪ್ಪ ಸಾಹೇಬರ ಟೈಂ ಕೇಳಿ ನಾಳೆ, ನಾಡಿದ್ದರೊಳಗೆ ಭೇಟಿ ಮಾಡ್ತಿನಿ. ಎಲ್ಲರೂ ಒಂದೇ ವಿಶ್ವಾಸದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದರು.

ನಮ್ಮ ಗುರಿ ಇರೋದು ಕಾಂಗ್ರೆಸ್‌ನ್ನು ಹಾಸನದಿಂದ‌ ದೂರ ಮಾಡಬೇಕು. ಮತ್ತೊಮ್ಮೆ ಮೋದಿಯವರನ್ನು ಪ್ರಧಾನಮಂತ್ರಿ ಮಾಡಿ ದೇವೇಗೌಡರ ಕೈ ಬಲಪಡಿಸಬೇಕು ಎನ್ನುವುದಾಗಿದೆ. ಜಿಲ್ಲೆಯ ಅಭಿವೃದ್ಧಿಗೋಸ್ಕರ ಎಲ್ಲಾ ರೀತಿ ಶ್ರಮಿಸುತ್ತೇವೆ ಎಂದರು.

ಮಂಡ್ಯದಿಂದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ನಮ್ಮ ಹತ್ತಿರ ಮಾಹಿತಿ ಇಲ್ಲ. ಅದನ್ನು ಮಂಡ್ಯದ ಜನ ತೀರ್ಮಾನ ಮಾಡ್ತಾರೆ. ಅಲ್ಲಿಯ ಕಾರ್ಯಕರ್ತರ ಒತ್ತಡ ಕೂಡ ಇದೆ. ಅವರೆಲ್ಲರೂ ಏನು ಅಭಿಪ್ರಾಯ ವ್ಯಕ್ತಪಡಿಸುತ್ತಾರೋ, ದೇವೇಗೌಡರು ಏನು ಸೂಚಿಸಿತ್ತಾರೋ ಅದರಂತೆ ಕುಮಾರಣ್ಣ ತೀರ್ಮಾನ ತೆಗೆದುಕೊಳ್ಳುತ್ತಾರೆ ಅದರ ಬಗ್ಗೆ ಮುಂದಿನ ಎರಡು ದಿನಗಳಲ್ಲಿ ತಿಳಿಸುತ್ತಾರೆ ಎಂದರು.

ಅವರು ಎಲ್ಲರ ವಿಶ್ವಾಸ ಪಡೆದು ಚುನಾವಣೆಗೆ ಹೋಗುವ ಕೆಲಸ ಮಾಡ್ತಾರೆ ಎಂದರು.