ಪ್ರೀತಂಗೌಡ ಟೀಂಗೆ ಟಾಂಗ್ ನೀಡಲು ಬಿಜೆಪಿ ಕಟ್ಟಾಳುಗಳ‌ ಮನೆಗೆ ಎಡತಾಕುತ್ತಿರುವ ಪ್ರಜ್ವಲ್ ರೇವಣ್ಣ

ಹಾಸನ:  ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ಗೆ ಬೆಂಬಲ‌ ನೀಡಲು ಒಪ್ಪದೇ ಅಭ್ಯರ್ಥಿ ಬದಲಿಗೆ ಒತ್ತಾಯಿಸುತ್ತಿರುವ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡರ ಟೀಂಗೆ ಸಂಸದ ಪ್ರಜ್ವಲ್‌ ರೇವಣ್ಣ ಮತ್ತೊಮ್ಮೆ‌ ಮೋದಿ ಘೋಷಣೆ ಮುಂದಿಟ್ಟುಕೊಂಡು ಟಾಂಗ್ ನೀಡಲು ಮುಂದಾಗಿದ್ದಾರೆ.

ಬಿಜೆಪಿ ನಿಷ್ಠಾವಂತ ಮುಖಂಡರು, ಕಾರ್ಯಕರ್ತರು ಹಾಗೂ ಆರ್‌ಎಸ್‌ಎಸ್‌ ಹಿನ್ನೆಲೆ ಇರುವ ಮತ್ತು ಆರಂಭದಿಂದಲೂ ಕಟ್ಟಾ ಬಿಜೆಪಿ ಬೆಂಬಲಿಗರಾಗಿ ಗುರುತಿಸಿಕೊಂಡಿರುವವರ ಮನೆ ಮನೆಗೆ ಭೇಟಿ ನೀಡಿ ಲೋಕಸಭಾ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಮನವಿ ಮಾಡತೊಡಗಿದ್ದಾರೆ.

ಕೆ.ಎಸ್.ಆರ್.ಟಿ.ಸಿ. ಮಾಜಿ ಉಪಾಧ್ಯಕ್ಷ, ವಕೀಲ ಸೀಗೆ ಈಶ್ವರಪ್ಪ, ಜಿಲ್ಲಾ ಬಿಜೆಪಿ ಮಾಜಿ ಮಾಧ್ಯಮ ಪ್ರಮುಖ್ ಐನೆಟ್ ವಿಜಯ್ ಕುಮಾರ್ ಮುಂತಾದವರ ನಿವಾಸಗಳಿಗೆ ಪ್ರಜ್ವಲ್ ಭೇಟಿ ನೀಡಿ ಅವರೊಂದಿಗೆ ಖಾಸಗಿಯಾಗಿ ಮಾತುಕತೆ ನಡೆಸಿ ಬೆಂಬಲ ಕೋರಿದ್ದಾರೆ.

25 ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಬಿಜೆಪಿಗೆ ಬೆಂಬಲ ನೀಡುತ್ತಿದೆ. ಮೂರು ಕ್ಷೇತ್ರಗಳಲ್ಲಿ ಜೆಡಿಎಸ್‌ಗೆ ಬೆಂಬಲ ನೀಡಬೇಕು. ಇದರಿಂದ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ನಿಮ್ಮ ಕನಸಿಗೆ ಸಹಕಾರ ದೊರಕಿದಂತಾಗುತ್ತದೆ ಎಂದು  ಪ್ರಜ್ವಲ್‌ರೇವಣ್ಣ ಮನವಿ ಮಾಡುತ್ತಿದ್ದಾರೆ.

ಐನೆಟ್ ವಿಜಯ್ ಕುಮಾರ್ ಅವರ ನಿವಾಸಕ್ಕೆ ಪ್ರಜ್ವಲ್ ಭೇಟಿ ನೀಡಿ‌ ಮಾತುಕತೆ ನಡೆಸಿದರು.

ಹಾಸನ, ಸಕಲೇಶಪುರ, ಆಲೂರು ಭಾಗದ ಬಿಜೆಪಿ ಮುಖಂಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಮಾಜಿ ಶಾಸಕ ಪ್ರೀತಂಗೌಡ ಬೆಂಬಲ ನೀಡಲು ಇನ್ನೂ ನಿರ್ಧರಿಸದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರನ್ನು ಭೇಟಿ ಮಾಡಿ ಬೆಂಬಲ ಕೋರಿದ್ದಾರೆ.