ಪೊಲೀಸರು ಜನರ ರಕ್ಷಣೆಗೆ ಇರೋದಾ? ಇಲ್ಲಾ ಕಿರುಕುಳ ಕೊಡಲು ಇರೋದಾ?; ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರಜ್ವಲ್ ರೇವಣ್ಣ ಗರಂ

ಅರಸೀಕೆರೆ ಭಾಗದಲ್ಲಿ ಸಣ್ಣಪುಟ್ಟ ಸಮಾಜದವರು ಬದುಕಲು ಆಗುತ್ತಿಲ್ಲ

ಹಾಸನ: ಅರಸೀಕೆರೆ ಭಾಗದಲ್ಲಿ ಸಣ್ಣಪುಟ್ಟ ಸಮಾಜದವರು ಬದುಕಲು ಆಗುತ್ತಿಲ್ಲ, ಪೊಲೀಸರು ಜನರ ರಕ್ಷಣೆಗೆ ಇರೋದಾ? ಇಲ್ಲಾ ಕಿರುಕುಳ ಕೊಡಲು ಇರೋದಾ? ಎಂದು ಸಂಸದ ಪ್ರಜ್ವಲ್ ರೇವಣ್ಣ ಪೊಲೀಸ್ ಅಧಿಕಾರಿಗಳ ಮೇಲೆ ಆಕ್ರೋಶ ಹೊರ ಹಾಕಿದರು.

ಹಾಸನ ಜಿ.ಪಂ. ಹೊಯ್ಸಳ ಸಭಾಂಗಣದಲ್ಲಿ ಆಯೋಜಿಸಿದ್ದ ದಿಶಾ ಸಭೆಯಲ್ಲಿ ಪೊಲೀಸರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ದಿಶಾ ಸಭೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿದರು

ಒಬ್ಬ ಶೇಖರ್ ಯಾದವ್ ಎಂಬವರನ್ನು ಕರೆದುಕೊಂಡು ಬಂದು ಎರಡು ದಿನ ಸ್ಟೇಷನ್‌ನಲ್ಲಿ ಇರಿಸಿಕೊಂಡು ಪಿಟಿ ಕೇಸ್ ಹಾಕಿ ಹೊಡೆದು, ಚಚ್ಚಿದ್ದಾರೆ. ನಾನು ಗಲಾಟೆ ಮಾಡ್ತಿನಿ ಅಂದಾಗ ಬಿಟ್ಟು ಕಳುಹಿಸಿದ್ದಾರೆ ಎಂದರು.

ಹಣದ ವ್ಯವಹಾರದ ವಿಚಾರಕ್ಕೆ ಕರೆದುಕೊಂಡು ಬಂದವರ ಮೇಲೆ 353 ಪ್ರಕಾರ ಕೇಸ್ ಮಾಡಿದ್ದಾರೆ. ಹೀಗೆ ನಡೆದುಕೊಳ್ಳಲು ಅವರಿಗೆ ಅಧಿಕಾರ ಕೊಟ್ಟಿದ್ದು ಯಾರು? ಅವನಿಗೆ ನಡೆಯಲು ಆಗದ ರೀತಿ ಹೊಡೆದಿದ್ದಾರೆ.

ನಾನು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ಕೂರುತ್ತೇನೆ ಎಂದ ಮೇಲೆ ಅವನಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಇಂತಹ ಹಲವಾರು ಪ್ರಕರಣಗಳು ನಡೆಯುತ್ತಿವೆ ನಡೆಯುತ್ತಿದೆ ಎಂದು ಸಿಡಿಮಿಡಿಯಾದರು.

ನ್ಯಾಫೆಡ್ ಖರೀದಿ ಕೇಂದ್ರದವರು ಫೋನ್ ಮಾಡಿದ ಕೂಡಲೇ ಏಕೆ ರಿಸರ್ವ್ ಪೊಲೀಸ್ ಕಳಿಸ್ತೀರಿ? ಹಿಂದೆ-ಮುಂದೆ ಯೋಚನೆ ಮಾಡಲ್ವಾ? ಅಲ್ಲಿ ಏನು ನಡಿತಿದೆ ಅಂತ ತಿಳಿದುಕೊಳ್ಳದೆ ಫೋನ್ ಬಂದ ತಕ್ಷಣ ರಿಸರ್ವ್ ಪೊಲೀಸ್ ನಿಯೋಜಿಸುತ್ತೀರಿ. ಇನ್ಮುಂದೆ ಯೋಚನೆ ಮಾಡಿ ಕಳುಹಿಸಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

ಅರಸೀಕೆರೆಯಲ್ಲಿ ಪೊಲೀಸರೇ ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ.

ನಾನು ಡಿವೈಎಸ್‌ಪಿ ಗಮನಕ್ಕೂ ತಂದಿದ್ದೇನೆ.
ನಾನು ಸುಮ್ಮನೆ ನೋಡುತ್ತಲೇ ಇದ್ದೇನೆ. ಅರಸೀಕೆರೆಯಲ್ಲಿ ಸಣ್ಣಪುಟ್ಟ ಸಮಾಜದವರು ಬದುಕುವ ಹಾಗೇ ಇಲ್ಲ ಎಂದರು.