ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್-ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಪ್ರಜ್ವಲ್ ರೇವಣ್ಣ

ಬರಿಗಾಲಿನಲ್ಲಿ ಓಡೋಡಿ ಬಂದ ರೇವಣ್ಣ!

ಹಾಸನ: ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಸಂಸದ ಪ್ರಜ್ವಲ್ ರೇವಣ್ಣ ಗುರುವಾರ ನಾಮಪತ್ರ ಸಲ್ಲಿಸಿದರು.

ಶಾಸಕರಾದ ಎ.ಮಂಜು, ಸಿ.ಎನ್.ಬಾಲಕೃಷ್ಣ, ಎಚ್.ಪಿ.ಸ್ವರೂಪ್ ಅವರೊಂದಿಗೆ ಜಿಲ್ಲಾ ಚುನಾವಣಾಧಿಕಾರಿ ಕಚೇರಿಗೆ ಆಗಮಿಸಿದ ಪ್ರಜ್ವಲ್ ರೇವಣ್ಣ, ನಾಮಪತ್ರ ಸಲ್ಲಿಸಿದರು. ಪೂಜೆಗೆ ತೆರಳಿದ್ದ ಮಾಜಿ ಸಚಿವ ಎಚ್.ಡಿ.ರೇವಣ್ಣ ತಡವಾಗಿ ಚುನಾವಣಾಧಿಕಾರಿಗೆ ಕಚೇರಿಗೆ ಬರಿಗಾಲಿನಲ್ಲಿ ಓಡೋಡುತ್ತಾ ಬಂದು ಸಾಥ್ ನೀಡಿದರು.

ಇದಕ್ಕೂ ಮೊದಲು ಮಾವಿನಕೆರೆ ರಂಗನಾಥಸ್ವಾಮಿಗೆ ಪೂಜೆ ಸಲ್ಲಿಸಿದ ಪ್ರಜ್ವಲ್ ಶಾಸಕರಾದ ಬಾಲಕೃಷ್ಣ ಹಾಗೂ ಎ.ಮಂಜು ಕಾಲಿಗೆರಗಿ ಆಶೀರ್ವಾದ ಪಡೆದರು.

ಹರದನಹಳ್ಳಿಯಲ್ಲಿದ್ದ ಅವರ ತಾತಾ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಂದ ಸೂಚಕರ ಸಹಿ ಹಾಕಿಸಿಕೊಂಡು ಆಶೀರ್ವಾದ ಪಡೆದರು.

ಶುಭದಿನವೆಂಬ ಕಾರಣಕ್ಕಾಗಿ ಸರಳವಾಗಿ ನಾಮಪತ್ರ ಸಲ್ಲಿಸಿದ ಪ್ರಜ್ವಲ್ ಏ.4ರಂದು ಶಕ್ತಿ ಪ್ರದರ್ಶನದ ಮೆರವಣಿಗೆಯಲ್ಲಿ ಆಗಮಿಸಿ ಮತ್ತೊಮ್ಮೆ ನಾಮಪತ್ರ ಸಲ್ಲಿಸುವರು.