ಹಾಸನ : ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣವನ್ನು ಎನ್ಐಎ ಅಥವಾ ಎಟಿಎಸ್ ತನಿಖೆಗೆ ವಹಿಸಬೇಕು ಎಂದು ಸಂಸದ ಪ್ರಜ್ವಲ್ ರೇವಣ್ಣ ಆಗ್ರಹಿಸಿದರು.
ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಯಾರೇ ತಪ್ಪಿತಸ್ಥರಿರಲಿ ಇದು ಅವರ ಕೊನೆಗಾಲವಾಗಬೇಕು, ಇದೊಂದು ಪಾಠವಾಗಬೇಕು. ಮುಂದಿನ ದಿನಗಳಲ್ಲಿ ಯಾರೇ ಆದರೂ ಈ ರೀತಿ ಮಾಡಲು ಹೆದರಬೇಕು, ಆ ರೀತಿ ದೊಡ್ಡ ಶಿಕ್ಷೆ ಕೊಡಬೇಕು ಎಂದರು.
ಬಾಂಬ್ ಬ್ಲಾಸ್ಟ್ ಬಗ್ಗೆ ಸಚಿವ ಶರಣ ಪ್ರಕಾಶ್ ಪಾಟೀಲ್ ನೀಡಿರುವ ಹೇಳಿಕೆಯನ್ನು ಖಂಡಿಸಿದ ಸಂಸದರು, ಅವರು ಮಾಡಿದ್ದಾರೆ, ಇವರು ಮಾಡಿದ್ದಾರೆ ಎಂದು ಬೊಟ್ಟು ಮಾಡಿ ತೋರಿಸುವುದಲ್ಲ, ಸುಮಾರು ಒಂಭತ್ತು ಜನಕ್ಕೆ ಗಾಯಗಳಾಗಿವೆ. ರಾಜಕೀಯ ಇರಲಿ, ಇಲ್ಲದೇ ಇಲ್ಲದಿರಲಿ, ಯಾರೇ ತಪ್ಪಿತಸ್ಥರಿರಲಿ ಅವರಿಗೆ ಶಿಕ್ಷೆ ಆಗಬೇಕು ಎಂದರು.
ಕರ್ನಾಟಕ ರಾಜ್ಯದಲ್ಲಿ ಸಾರ್ವಜನಿಕರು ಸುಭದ್ರವಾಗಿ ಬದುಕಬೇಕು. ಕೇಂದ್ರ ಹಾಗೂ ರಾಜ್ಯ ಇದರ ಬಗ್ಗೆ ಗಮನ ಹರಿಸಬೇಕು. ಅವರು ತಪ್ಪು ಮಾಡಿದ್ದಾರೆ, ಇವರು ತಪ್ಪು ಮಾಡಿದ್ದಾರೆ ಎನ್ನುತ್ತಿದ್ದಾರೆ.
ಆದರೆ ಇದರಲ್ಲಿ ನೋವು ಅನುಭವಿಸುತ್ತಿರುವುದು ಜನರು, ಈ ಹೇಳಿಕೆಗಳನ್ನು ಖಂಡಿಸುತ್ತೇನೆ ಎಂದರು.
ಈ ಥರ ಹೇಳಿಕೆ ನೀಡುವ ಬದಲು ಗಾಯಗೊಂಡಿರುವ ಕುಟುಂಬಗಳು ನೋವಿನಲ್ಲಿವೆ,ರಾಜ್ಯದಲ್ಲಿ ಜನರು ಭಯಭೀತರಾಗಿದ್ದಾರೆ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಲಿ. ಅವರ ಪರವಾಗಿ ಸರ್ಕಾರ ನಿಲ್ಲಲಿ ಎಂದು ಆಗ್ರಹಿಸಿದರು.
ಆ ಹೇಳಿಕೆಗಳು, ಧೋರಣೆ ಬಹಳಷ್ಟು ಒಳ್ಳೆಯದಲ್ಲ, ಒಂಭತ್ತು ಜನಕ್ಕೆ ಗಾಯಗಳಾಗಿವೆ. ಒಬ್ಬ ಮಹಿಳೆ ಸೀರಿಯಸ್ ಕಂಡಿಷನ್‌ನಲ್ಲಿದ್ದಾರೆ. ಒಬ್ಬರಿಗೆ ಕಣ್ಣಿಗೆ ಏಟಾಗಿ ದೃಷ್ಟಿ ಬರುವುದೇ ಅನುಮಾನ ಎಂದಿದ್ದಾರೆ. ವಿಚಾರ ಇಷ್ಟು ಗಂಭೀರವಾಗಿರುವಾಗ ಇದು ಸಿಲ್ಲಿ ಅಟೆಮ್ಟ್ ಅಂತ ತಮಾಷೆಗೆ ತೆಗೆದುಕೊಳ್ಳಬಾರದು.ಇದು ಅವರ ಸ್ಥಾನಕ್ಕೆ, ಅವರಿಗೆ ಗೌರವ ತರುವುದಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.